ಎರಡು ತಿಂಗಳಲ್ಲಿ ಎರಡನೇ ಬಾರಿ ಪಾಕ್ ಸೇನಾ ಮುಖ್ಯಸ್ಥ ಅಮೆರಿಕಕ್ಕೆ ಭೇಟಿ
ಅಸೀಮ್ ಮುನೀರ್ PC: x.com/the_hindu
ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್, ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಇದು ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸೇನಾ ಸಹಕಾರಕ್ಕೆ ಒತ್ತು ನೀಡಲಿದೆ. ಜತೆಗೆ ಮುನೀರ್ ಸ್ವದೇಶ ಹಾಗೂ ಹೊರದೇಶಗಳಲ್ಲಿ ರಾಜಕೀಯ ವಿಭಜನೆ ಹಿನ್ನಲೆಯಲ್ಲಿಯೂ ಈ ಭೇಟಿ ಮಹತ್ವ ಪಡೆದಿದೆ.
ಫ್ಲೋರಿಡಾದ ತಂಪಾದಲ್ಲಿ ಈ ವಾರ ನಡೆಯುವ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಕಮಾಂಡರ್ ಜನರಲ್ ಮೈಕೆಲ್ ಇ ಕುರಿಲ್ಲಾ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಂಬಂಧವನ್ನು ಬಲಗೊಳಿಸಿದ ಕಾರಣಕ್ಕೆ ಪಾಕಿಸ್ತಾನದ ಅತ್ಯುನ್ನತ ಗೌರವಗಳಲ್ಲೊಂದಾದ ನಿಶಾನ್-ಇ-ಇಮ್ತಿಯಾಜ್ (ಸೇನಾ) ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಕುರಿಲ್ಲಾ ಜುಲೈನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು.
ಹಲವು ವರ್ಷಗಳ ಸಂಘರ್ಷದ ಬಳಿಕ ಉಭಯ ದೇಶಗಳ ಸೇನಾ ಸಹಕಾರವು ವಿಶೇಷ ಮಹತ್ವ ಪಡೆದಿದೆ. ಜೂನ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಮುನೀರ್ ಗೌರವಾರ್ಥ ಔತಣ ಕೂಟ ಏರ್ಪಡಿಸಿದ್ದರು. ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಸಂಘರ್ಷದ ವೇಳೆ ಅಣ್ವಸ್ತ್ರ ಯುದ್ಧವನ್ನು ತಪ್ಪಿಸಿದ ಕೀರ್ತಿ ಮುನೀರ್ ಅವರಿಗೆ ಸಲ್ಲುತ್ತದೆ ಎಂದು ಟ್ರಂಪ್ ಈ ಸಂದರ್ಭದಲ್ಲಿ ಘೋಷಿಸಿದ್ದರು.
ಮುನೀರ್ ಹಾಗೂ ಅಮೆರಿಕ ಸಂಬಂಧದ ಬಗ್ಗೆ ವಿರೋಧಗಳೂ ವ್ಯಕ್ತವಾಗಿವೆ. ಸೆರೆಮನೆವಾಸ ಅನುಭವಿಸುತ್ತಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಆಗಸ್ಟ್ 5ರಂದು ಅಮೆರಿಕ ಹಾಗೂ ಯೂರೋಪ್ ನ ಹಲವು ನಗರಗಳಲ್ಲಿ ಪ್ರತಿಭನೆಗಳು ನಡೆದಿದ್ದವು. ಜತೆಗೆ 2023ರ ಮೇ 9ರ ಕಾರ್ಯಾಚರಣೆಯಲ್ಲಿ ಸೇನೆಯ ಪಾತ್ರವನ್ನು ಪ್ರತಿಭಟನಾಕಾರರು ವಿರೋಧಿಸಿದ್ದರು.