×
Ad

ಫೆಬ್ರವರಿ 8ರ ಪಾಕಿಸ್ತಾನ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಪಾಕಿಸ್ತಾನ ನ್ಯಾಯಾಲಯಗಳಲ್ಲಿ ಅರ್ಜಿಗಳ ಮಹಾಪೂರ

Update: 2024-02-11 15:28 IST

ಇಮ್ರಾನ್ ಖಾನ್ | pHOTO: PTI 

ಇಸ್ಲಮಾಬಾದ್: ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಸದ್ಯ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್ ಇನ್ಸಾಫ್ ಪಕ್ಷದ ಬೆಂಬಲಿತ ಪರಾಜಿತ ಅಭ್ಯರ್ಥಿಗಳು ಸಲ್ಲಿಸುತ್ತಿರುವ ಅರ್ಜಿಗಳಿಂದ ಪಾಕಿಸ್ತಾನದ ನ್ಯಾಯಾಲಯಗಳು ತುಂಬಿ ತುಳುಕುತ್ತಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಹುತೇಕ ಅರ್ಜಿಗಳು ಲಾಹೋರ್ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದರೆ, ಇಬ್ಬರು ಪಾಕಿಸ್ತಾನ್ ತೆಹ್ರಿಕ್ ಇನ್ಸಾಫ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಫಲಿತಾಂಶವನ್ನು ಪ್ರಶ್ನಿಸಿ ಇಸ್ಲಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ಕನಿಷ್ಠ ಮೂರು ಅರ್ಜಿಗಳು ಸಿಂಧ್ ಹೈಕೋರ್ಟ್‌ನಲ್ಲಿ ದಾಖಲಾಗಿವೆ. ಪಾಕಿಸ್ತಾನ ಚುನಾವಣಾ ಆಯೋಗವಿನ್ನೂ ಪೂರ್ಣ ಪ್ರಮಾಣದ ಚುನಾವಣಾ ಫಲಿತಾಂಶ ಪ್ರಕಟಿಸಬೇಕಿದೆ.

ಪಾಕಿಸ್ತಾನ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಇನ್ಸಾಫ್ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಪಾಕಿಸ್ತಾನದ ಸಂಸತ್ತಿನ ಸಿಂಹಪಾಲು ಸ್ಥಾನಗಳಲ್ಲಿ ಜಯ ಗಳಿಸಿದ್ದು, ಒಟ್ಟು 102 ಕ್ಷೇತ್ರಗಳಲ್ಲಿ ವಿಜಯಿಯಾಗಿದ್ದಾರೆ.

ಪಾಕಿಸ್ತಾನ್ ತೆಹ್ರಿಕ್-ಇನ್ಸಾಫ್ ಪಕ್ಷದ ನಂತರ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ 74 ಸ್ಥಾನಗಳು, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 54 ಸ್ಥಾನಗಳು, ಮುತ್ತಹಿದ ಕ್ವಾಮಿ ಮೂವ್‌ಮೆಂಟ್ 17 ಸ್ಥಾನಗಳು ಹಾಗೂ ಇತರ 12 ಸ್ಥಾನಗಳು ಸಣ್ಣಪುಟ್ಟ ಪಕ್ಷಗಳ ಪಾಲಾಗಿವೆ. ಪಾಕಿಸ್ತಾನ ಚುನಾವಣಾ ಆಯೋಗವು ಈವರೆಗೆ 265 ಸ್ಥಾನಗಳ ಪೈಕಿ 259 ಸ್ಥಾನಗಳ ಫಲಿತಾಂಶವನ್ನು ಪ್ರಕಟಿಸಿದೆ.

ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸದನ-88ರ ಫಲಿತಾಂಶವನ್ನು ಪಾಕಿಸ್ತಾನ ಚುನಾವಣಾ ಆಯೋಗವು ತಡೆ ಹಿಡಿದಿದೆ. ದೂರುದಾರರ ಆಕ್ಷೇಪಣೆಗಳನ್ನು ಪರಿಹರಿಸಿದ ನಂತರ, ಈ ಕ್ಷೇತ್ರದ ಫಲಿತಾಂಶ ಪ್ರಕಟವಾಗಲಿದೆ. ಇನ್ನು ಕೇವಲ ಐದು ಕ್ಷೇತ್ರಗಳ ಫಲಿತಾಂಶ ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News