ವಿವಾದಿತ `ಕ್ರೀಕ್ ಪ್ರದೇಶ'ಕ್ಕೆ ಪಾಕ್ ನೌಕಾಪಡೆ ಮುಖ್ಯಸ್ಥರ ಭೇಟಿ; ಅತ್ಯಾಧುನಿಕ ಹೋವರ್‍ಕ್ರಾಫ್ಟ್ ಗಳ ನಿಯೋಜನೆ
ನವೀದ್ ಅಶ್ರಫ್ | Photo Credit : News18
ಇಸ್ಲಮಾಬಾದ್, ಅ.26: ಪಾಕಿಸ್ತಾನದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನವೀದ್ ಅಶ್ರಫ್ ಅವರು ಭಾರತದೊಂದಿಗೆ ಕಡಲ ಗಡಿಯಲ್ಲಿರುವ ವಿವಾದಿತ `ಸರ್ ಕ್ರೀಕ್' ಪ್ರದೇಶಗಳಲ್ಲಿ ಪಾಕಿಸ್ತಾನದ ಮುಂಚೂಣಿ ನೆಲೆಗಳಿಗೆ ಅತ್ಯಂತ ಗಮನಾರ್ಹ ಭೇಟಿಯನ್ನು ಕೈಗೊಂಡಿರುವುದಾಗಿ ವರದಿಯಾಗಿದೆ.
ವಿವಾದಾತ್ಮಕ `ಸರ್ ಕ್ರೀಕ್' ಪ್ರದೇಶಗಳ ವಿಷಯದಲ್ಲಿ ಪಾಕಿಸ್ತಾನದ ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಅಚಲವಾದ ನಿಲುವನ್ನು ಪ್ರತಿಪಾದಿಸುವ ಕ್ರಮವಿದು ಎಂದು ವಿಶ್ಲೇಷಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಅವರು `ಸರ್ ಕ್ರೀಕ್‍ನಿಂದ ಜಿವಾನಿಯವರೆಗಿನ ನಮ್ಮ ಕಡಲ ಗಡಿಗಳ ಪ್ರತಿ ಇಂಚನ್ನೂ ರಕ್ಷಿಸುವ' ಪ್ರತಿಜ್ಞೆ ಮಾಡಿರುವುದು ಈ ಸೂಕ್ಷ್ಮ ಕರಾವಳಿ ವಲಯದ ಮೇಲೆ ಪಾಕಿಸ್ತಾನ ಕಾರ್ಯತಂತ್ರದ ಗಮನವನ್ನು ಹೆಚ್ಚಿಸಿರುವುದನ್ನು ಬಿಂಬಿಸಿದೆ. ಇದೇ ಸಂದರ್ಭ ಅಡ್ಮಿರಲ್ ಅಶ್ರಫ್ 3 ಅತ್ಯಾಧುನಿಕ `2400 ಟಿಡಿ ಹೋವರ್‍ಕ್ರಾಫ್ಟ್ ಗಳನ್ನು ಅಧಿಕೃತವಾಗಿ ನೌಕಾದಳಕ್ಕೆ ನಿಯೋಜಿಸಿದರು. ಹೋವರ್‍ಕ್ರಾಫ್ಟ್ ಅನ್ನು ನಿರ್ದಿಷ್ಟವಾಗಿ ವಿವಿಧ ಸವಾಲಿನ ಭೂಪ್ರದೇಶಗಳನ್ನು (ಆಳವಿಲ್ಲದ ನೀರು, ಮರಳು ದಿಬ್ಬಗಳು, ಜವುಗು ಪ್ರದೇಶಗಳು ಇತ್ಯಾದಿ) ಏಕಕಾಲದಲ್ಲಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಕ್ರಾಫ್ಟ್(ದೋಣಿ, ನೌಕೆ) ಹೆಚ್ಚು ಪರಿಣಾಮಕಾರಿಯಾಗಿರದ ಸರ್ ಕ್ರೀಕ್ ನಂತಹ ಪ್ರದೇಶಗಳಲ್ಲಿ ಹೋವರ್‍ಕ್ರಾಫ್ಟ್ ಅತ್ಯಂತ ಸೂಕ್ತವಾಗಿದೆ.
ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಮತನಾಡಿದ ಅಡ್ಮಿರಲ್ ಅಶ್ರಫ್ `ಈ ಉಭಯಚರ ಹಡಗುಗಳ ಸೇರ್ಪಡೆಯು ದೇಶದ ಕಡಲ ಗಡಿಗಳು, ಕರಾವಳಿ ಬೆಲ್ಟ್, ವಿಶೇಷವಾಗಿ ಕ್ರೀಕ್ ಪ್ರದೇಶದ ರಕ್ಷಣೆಯನ್ನು ಬಲಪಡಿಸುವಲ್ಲಿ ಪಾಕಿಸ್ತಾನದ ನೌಕಾಪಡೆಯ ಅಚಲವಾದ ಸಂಕಲ್ಪವನ್ನು ಸಂಕೇತಿಸುತ್ತದೆ. ಕಡಲ ಭದ್ರತೆಯು ಮಿಲಿಟರಿ ಅಗತ್ಯ ಮಾತ್ರವಲ್ಲ, ನಮ್ಮ ದೇಶದ ಸಾರ್ವಭೌಮತ್ವದ ಮೂಲಾಧಾರ ಮತ್ತು ಆರ್ಥಿಕ ಸಮೃದ್ಧಿ ಹಾಗೂ ಸ್ಥಿರತೆಯ ಪ್ರಮುಖ ಆಧಾರ ಸ್ಥಂಭವಾಗಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
►ಭಾರತದ ಖಂಡನೆ
ವಿವಾದಿತ ಸರ್ ಕ್ರೀಕ್ ಪ್ರದೇಶಕ್ಕೆ ಅಡ್ಮಿರಲ್ ಅಶ್ರಫ್ ಭೇಟಿ ನೀಡಿರುವುದು ವಿವಾದಿತ ಕಡಲ ವಲಯದಲ್ಲಿ ಮಿಲಿಟರಿ ಪ್ರತಿಷ್ಟಾಪನೆಯನ್ನು ಯೋಜಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಭಾರತದ ಉನ್ನತ ಗುಪ್ತಚರ ಮೂಲಗಳು ಬಲವಾಗಿ ಖಂಡಿಸಿವೆ. ಭಾರತದ ಯೋಜಿತ `ತ್ರಿಶೂಲ್' ಸಮರಾಭ್ಯಾಸಗಳಿಗೆ ಮುಂಚಿತವಾಗಿ ನಡೆದಿರುವ ಈ ಬೆಳವಣಿಗೆ ಪ್ರಚೋದನಕಾರಿ ಮತ್ತು ಲೆಕ್ಕಾಚಾರದ ಕ್ರಮವಾಗಿದೆ. ಉದ್ವಿಗ್ನತೆಯನ್ನು ಹೆಚ್ಚಿಸುವುದು ಮತ್ತು ಸರ್ ಕ್ರೀಕ್ ವಿವಾದವನ್ನು ಅಂತರಾಷ್ಟ್ರೀಯಗೊಳಿಸುವುದು ಈ ಭೇಟಿಯ ಹಿಂದಿರುವ ಲೆಕ್ಕಾಚಾರವಾಗಿದೆ ಎಂದು ಭಾರತ ಖಂಡಿಸಿದೆ.
ಜೊತೆಗೆ, `ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್'ನ (ನಿರ್ದಿಷ್ಟವಾಗಿ ಗ್ವಾದರ್ ಮತ್ತು ಜಿವಾನಿಯನ್ನು ಸಂಪರ್ಕಿಸುವ) ನಿರ್ಣಾಯಕ ಕಡಲ ಮೂಲಸೌಕರ್ಯದ ಚೌಕಟ್ಟಿನಡಿ ಮುಂದುವರಿದ ಚೀನಾದ ಉಪಸ್ಥಿತಿ ಮತ್ತು ಸಹಕಾರದ ಸಮರ್ಥನೆಯನ್ನು ಬಲಪಡಿಸುವ ಕ್ರಮವಾಗಿದೆ ಎಂದು ಮೂಲಗಳು ಹೇಳಿವೆ.