ಪಾಕ್ ನಿಂದ ಪರಮಾಣು ಶಸ್ತ್ರಾಗಾರದ ಆಧುನೀಕರಣ: ಜಾಗತಿಕ ಅಪಾಯ ಮೌಲ್ಯಮಾಪನ ವರದಿ
ವಾಷಿಂಗ್ಟನ್: ಭಾರತವನ್ನು ಅಸ್ತಿತ್ವವಾದದ ಬೆದರಿಕೆಯಾಗಿ ಪರಿಗಣಿಸಿರುವ ಪಾಕಿಸ್ತಾನವು ಮುಂದಿನ ದಿನಗಳಲ್ಲಿ ಪರಮಾಣು ಶಸ್ತ್ರಾಗಾರದ ಆಧುನೀಕರಣಕ್ಕೆ ಆದ್ಯತೆ ನೀಡಲಿದೆ ಎಂದು ಅಮೆರಿಕದ `ಜಾಗತಿಕ ಅಪಾಯ ಮೌಲ್ಯಮಾಪನ ವರದಿ'ಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ಸಾಂಪ್ರದಾಯಿಕ ಮಿಲಿಟರಿ ಅನುಕೂಲತೆಯನ್ನು ಸರಿದೂಗಿಸಲು ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಸೇರಿದಂತೆ ತನ್ನ ಮಿಲಿಟರಿ ಆಧುನೀಕರಣ ಪ್ರಯತ್ನವನ್ನು ಪಾಕಿಸ್ತಾನ ಮುಂದುವರಿಸಲಿದೆ. ಚೀನಾದೊಂದಿಗಿನ ನಿಕಟ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಗಮನಿಸಿದರೆ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಗೆ ಚೀನಾ ಹೆಚ್ಚಿನ ನೆರವು ನೀಡಿರುವುದು ಸ್ಪಷ್ಟವಾಗಿದೆ.
ಚೀನಾವು ಪಾಕಿಸ್ತಾನಕ್ಕೆ ವಸ್ತುಗಳು ಮತ್ತು ತಂತ್ರಜ್ಞಾನವನ್ನು ಒದಗಿಸಿರುವ ಸಾಧ್ಯತೆಯಿದೆ. ಕೆಲವೊಮ್ಮೆ ಇವನ್ನು ಹಾಂಕಾಂಗ್, ಸಿಂಗಾಪುರ, ಟರ್ಕಿ ಮತ್ತು ಯುಎಇ ಮೂಲಕ ಸಾಗಿಸಲಾಗಿದೆ ಎಂದು ವರದಿ ಹೇಳಿದೆ. ಮೇ 9ರಂದು ಪಾಕಿಸ್ತಾನಕ್ಕೆ ಐಎಂಎಫ್ 1 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಿದೆ.
ಐಸಿಎಎನ್ ವರದಿ ಪ್ರಕಾರ 2023ರಲ್ಲಿ ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳಿಗೆ 1 ಶತಕೋಟಿ ಡಾಲರ್ ವೆಚ್ಚ ಮಾಡಿದೆ.