ಫೆಲೆಸ್ತೀನ್‍ಗೆ ರಾಷ್ಟ್ರದ ಸ್ಥಾನಮಾನ ಪುರಸ್ಕಾರವಲ್ಲ, ಹಕ್ಕು: ವಿಶ್ವಸಂಸ್ಥೆ
PC ; PTI
ವಿಶ್ವಸಂಸ್ಥೆ, ಸೆ.23: ಆಕ್ರಮಿತ ಪಶ್ಚಿಮದಂಡೆಯಲ್ಲಿ ವಸಾಹತುಗಳ ವಿಸ್ತರಣೆಯನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯ(ಯುಎನ್‍ಜಿಸಿಎ) ಅಧ್ಯಕ್ಷೆ ಅನ್ನಾಲಿನಾ ಬೇರ್ಬಾಕ್ ಸೋಮವಾರ ಖಂಡಿಸಿದ್ದು ಎರಡು ರಾಷ್ಟ್ರಗಳ ಪರಿಹಾರ ಸೂತ್ರದ ಮಹತ್ವವನ್ನು ಒತ್ತಿಹೇಳಿದ್ದಾರೆ.
ಆಕ್ರಮಿತ ಪಶ್ಚಿಮದಂಡೆಯಲ್ಲಿ ವಸಾಹತು ವಿಸ್ತರಣೆ ಮತ್ತು ಧ್ವಂಸಮಾಡುವ ಕಾರ್ಯಗಳು ರಾಜಕೀಯ ಪರಿಹಾರ ನಿರೀಕ್ಷೆಗಳನ್ನು ಕ್ಷೀಣಿಸುತ್ತಿವೆ. ಗಾಝಾದಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳಡಿ ಸಮಾಧಿಯಾದವರ ಕುಟುಂಬಗಳ ಮತ್ತು ಹಮಾಸ್‍ನ ಸೆರೆಯಲ್ಲಿರುವ ಒತ್ತೆಯಾಳುಗಳ ಬಿಡುಗಡೆಗಾಗಿ ಕಾಯುತ್ತಿರುವ ಕುಟುಂಬಗಳ ಜೊತೆ ಮಾತನಾಡಿದ್ದು ಅವರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಗಾಝಾದಲ್ಲಿನ ಭೀಕರ ವಿನಾಶ ಪುನರಾವರ್ತನೆಗೊಳ್ಳಲು ಅಥವಾ ಮುಂದುವರಿಯಲು ಅವಕಾಶ ನೀಡದೆ ಇರುವುದು ಅಂತರಾಷ್ಟ್ರೀಯ ಸಮುದಾಯದ ಹೊಣೆಗಾರಿಕೆಯಾಗಿದೆ ಎಂದವರು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಗಾಝಾದಲ್ಲಿನ ಪರಿಸ್ಥಿತಿ ಅಸಹನೀಯವಾಗಿದ್ದು ಎರಡು ರಾಷ್ಟ್ರಗಳ ಪರಿಹಾರ ಸೂತ್ರ ಮಾತ್ರವೇ ಈ ಸಂಕಟದಿಂದ ಹೊರಬರುವ ಏಕೈಕ ಮಾರ್ಗವಾಗಿದೆ ಎಂದರು. ಎರಡು ರಾಷ್ಟ್ರಗಳ ಪರಿಹಾರವನ್ನು ಬೆಂಬಲಿಸುವ ಮತ್ತು ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸುವ ದೇಶಗಳ ನಿಲುವನ್ನು ಸ್ವಾಗತಿಸಿದ ಗುಟೆರಸ್, ಇದೇ ವೇಳೆ ಅಕ್ಟೋಬರ್‌ನಲ್ಲಿ ಹಮಾಸ್ ನಡೆಸಿದ ಉಗ್ರ ದಾಳಿ ಮತ್ತು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದು ಖಂಡಿತಾ ಸಮರ್ಥನೀಯವಲ್ಲ ಎಂದರು.
ಫೆಲೆಸ್ತೀನ್‍ಗೆ ರಾಷ್ಟ್ರದ ಸ್ಥಾನಮಾನ ನೀಡುವುದು ಹಮಾಸ್‍ಗೆ ಪುರಸ್ಕಾರ ನೀಡಿದಂತಾಗುತ್ತದೆ ಎಂಬ ಅಮೆರಿಕ ಮತ್ತು ಇಸ್ರೇಲ್‍ನ ಹೇಳಿಕೆಗೆ ಪ್ರತಿಕ್ರಿಯಿಸಿದ ಗುಟೆರಸ್ `ಇದು ಹಕ್ಕು, ಪುರಸ್ಕಾರವಲ್ಲ ಮತ್ತು ಇದು ಇಲ್ಲದೆ ವಲಯದಲ್ಲಿ ಶಾಂತಿ ಸಾಧ್ಯವಾಗದು ಮತ್ತು ಫೆಲೆಸ್ತೀನ್ ಜನರನ್ನು ಸಾಮೂಹಿಕವಾಗಿ ಶಿಕ್ಷಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ' ಎಂದು ಹೇಳಿದರು. ಈ ಮಧ್ಯೆ, ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಿದ ದೇಶಗಳ ಸಾಲಿಗೆ ಮೊನಾಕೊ ಸೇರ್ಪಡೆಗೊಂಡಿದೆ. ಈಗಾಗಲೇ 145ಕ್ಕೂ ಹೆಚ್ಚು ದೇಶಗಳು ಫೆಲೆಸ್ತೀನ್ ರಾಷ್ಟ್ರವನ್ನು ಗುರುತಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.