×
Ad

ಲಂಡನ್‌ನಲ್ಲಿ ಫೆಲೆಸ್ತೀನ್‌ ರಾಯಭಾರ ಕಚೇರಿ ಉದ್ಘಾಟನೆ; ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೋಮ್ಲೋಟ್

Update: 2026-01-06 13:46 IST

Photo credit: X/@hzomlot

ಲಂಡನ್: ಯುನೈಟೆಡ್ ಕಿಂಗ್‌ಡಮ್‌ ನಲ್ಲಿ ಫೆಲೆಸ್ತೀನ್‌ ದೇಶದ ರಾಯಭಾರ ಕಚೇರಿ ಸೋಮವಾರ ಅಧಿಕೃತವಾಗಿ ಉದ್ಘಾಟನೆಯಾಯಿತು. ಪಶ್ಚಿಮ ಲಂಡನ್‌ ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಫೆಲೆಸ್ತೀನ್‌ ರಾಯಭಾರಿ ಹುಸಾಮ್ ಝೋಮ್ಲೋಟ್, ಈ ಬೆಳವಣಿಗೆಯನ್ನು ‘ಐತಿಹಾಸಿಕ ಕ್ಷಣ’, ಇದು ಬ್ರಿಟಿಷ್–ಫೆಲೆಸ್ತೀನ್‌ ಸಂಬಂಧಗಳಲ್ಲಿ ಆಳವಾದ ಮೈಲಿಗಲ್ಲು ಎಂದು ಹೇಳಿದರು.

ಪೂರ್ಣ ರಾಜತಾಂತ್ರಿಕ ಸ್ಥಾನಮಾನ ಮತ್ತು ಸವಲತ್ತುಗಳೊಂದಿಗೆ ರಾಯಭಾರ ಕಚೇರಿ ಸ್ಥಾಪನೆಯಾಗಿರುವುದು ಫೆಲೆಸ್ತೀನ್‌ ಜನರ ಸಾರ್ವಭೌಮ ರಾಜ್ಯತ್ವ ಮತ್ತು ರಾಷ್ಟ್ರಗಳ ನಡುವಿನ ಸಮಾನತೆಯ ಅವಿಭಾಜ್ಯ ಹಕ್ಕಿನ ಸಂಕೇತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲ ಸ್ವಯಂ ನಿರ್ಣಯದಿಂದ ವಂಚಿತರಾಗಿದ್ದ ಜನರಿಗೆ ಇದು ಸ್ಮರಣೀಯ ಘಟ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗಾಝಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸಿದ ಎರಡು ವರ್ಷಗಳ ಯುದ್ಧದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲೇ, ಕಳೆದ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಫೆಲೆಸ್ತೀನ್‌ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿತ್ತು. ಆ ನಿರ್ಧಾರದ ಮುಂದುವರಿದ ಭಾಗವಾಗಿ ಇದೀಗ ರಾಯಭಾರ ಕಚೇರಿ ಉದ್ಘಾಟನೆಯಾಗಿದೆ.

“ಗಾಝಾ, ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆ, ನಿರಾಶ್ರಿತರ ಶಿಬಿರಗಳು ಹಾಗೂ ವಲಸೆಯಲ್ಲಿರುವ ಫೆಲೆಸ್ತೀನಿಯನ್ನರಿಗೆ ನಮ್ಮ ಗುರುತನ್ನು ನಿರಾಕರಿಸಲಾಗುವುದಿಲ್ಲ, ನಮ್ಮ ಅಸ್ತಿತ್ವವನ್ನು ಅಳಿಸಲಾಗುವುದಿಲ್ಲ ಎಂಬುದಕ್ಕೆ ಈ ರಾಯಭಾರ ಕಚೇರಿ ಪುರಾವೆಯಾಗಿದೆ,” ಎಂದು ಝೋಮ್ಲೋಟ್ ಹೇಳಿದರು.

ಫೆಲೆಸ್ತೀನ್‌ ಅನ್ನು ರಾಷ್ಟ್ರವಾಗಿ ಗುರುತಿಸುವ ವೇಳೆ, ಭವಿಷ್ಯದ ಮಾತುಕತೆಗಳಲ್ಲಿ ಅಂತಿಮಗೊಳ್ಳಬೇಕಾದ 1967ರ ಗಡಿಗಳ ಆಧಾರವನ್ನು ಯುಕೆ ಸ್ವೀಕರಿಸಿದೆ. ಜೊತೆಗೆ ಫೆಲೆಸ್ತೀನ್‌ ಗೆ ರಾಷ್ಟ್ರ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಒಪ್ಪಿಕೊಂಡಿದೆ.

ರಾಯಭಾರ ಕಚೇರಿಯ ಫಲಕವನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ರಾಜತಾಂತ್ರಿಕ ಮಾರ್ಷಲ್ ಅಲಿಸ್ಟೈರ್ ಹ್ಯಾರಿಸನ್, ಇದು ಫೆಲೆಸ್ತೀನ್‌ ಗೆ ಮಾತ್ರವಲ್ಲ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲೂ ಮಹತ್ವದ ಬದಲಾವಣೆಯ ಆರಂಭವಾಗಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಾಝಾದ 14 ವರ್ಷದ ಫೆಲೆಸ್ತೀನಿಯನ್ ಬಾಲಕ ಒಬೈದಾ, ಯುದ್ಧದ ಭೀಕರ ಅನುಭವವನ್ನು ಹಂಚಿಕೊಂಡರು. “ನಾನು ನರಮೇಧದಿಂದ ಬದುಕುಳಿದಿದ್ದೇನೆ. ಆದರೆ ನನ್ನ ದೇಹದಲ್ಲಿ ಆಳವಾದ ಗಾಯಗಳಿವೆ,” ಎಂದ ಅವರು, ತನ್ನ ಕುಟುಂಬದ ಕೆಲವರು ಯುಕೆಯಲ್ಲಿದ್ದರೂ ತಂದೆ ಇನ್ನೂ ಗಾಝಾದಲ್ಲೇ ಭಯಭೀತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

“ಒಂದು ದಿನ ನಾನು ರಾಯಭಾರಿಯಾಗಬೇಕು ಎಂಬ ಕನಸು ಇದೆ. ನನ್ನ ಜನರಿಗೆ ಸಹಾಯ ಮಾಡಬೇಕು, ನಮ್ಮ ಧ್ವನಿಯನ್ನು ಜಗತ್ತಿಗೆ ತಲುಪಿಸಬೇಕು,” ಎಂದು ಒಬೈದಾ ಹೇಳಿದರು. ಯುಕೆಯಿಂದ ದೊರೆತ ಈ ಮಾನ್ಯತೆ ಕೇವಲ ರಾಜತಾಂತ್ರಿಕ ಕ್ರಮವಲ್ಲ, ಲಂಡನ್‌ ನಲ್ಲಿ ಫೆಲೆಸ್ತೀನ್‌ ನ ಒಂದು ಭಾಗವನ್ನು ಹೊಂದಿರುವಂತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಫೆಲೆಸ್ತೀನ್‌ ಗೆ ನೀಡಿರುವ ಮಾನ್ಯತೆ ಎಲ್ಲ ದುಃಖಗಳನ್ನು ಅಳಿಸುವುದಿಲ್ಲವಾದರೂ, ಅದು ಫೆಲೆಸ್ತೀನಿನ ಮಕ್ಕಳಿಗೆ ಭರವಸೆ, ಘನತೆ ಮತ್ತು ಭಯವಿಲ್ಲದ ಭವಿಷ್ಯದ ಕನಸನ್ನು ನೀಡುತ್ತದೆ ಎಂದು ಒಬೈದಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News