ಟ್ರಂಪ್ ದಿಟ್ಟ, ನಿರ್ಣಾಯಕ ನಾಯಕತ್ವದಿಂದ ಭಾರತ-ಪಾಕ್ ನಡುವಿನ ಸಂಘರ್ಷ ಕೊನೆಗೊಂಡಿತು : ಪಾಕ್ ಪ್ರಧಾನಿ ಶೆಹಬಾಝ್ ಶರೀಫ್
Photo | AP
ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಪರಿಹರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಶರೀಫ್ ಮತ್ತೊಮ್ಮೆ ಧನ್ಯವಾದ ಸಲ್ಲಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ದಿನಗಳ ಕಾಲ ಗಡಿಯಾದ್ಯಂತ ನಡೆದಿದ್ದ ಭಾರಿ ಪ್ರಮಾಣದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯನ್ನು ಮೇ 10ರಂದು ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದನ್ವಯ ಅಂತ್ಯಗೊಳಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ಮೂರನೆಯ ವ್ಯಕ್ತಿ ಮಧ್ಯಸ್ಥಿಕೆ ವಹಿಸಿರಲಿಲ್ಲ ಎಂದು ಭಾರತ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ.
ಶನಿವಾರ ಬಾಕುವಿನಲ್ಲಿ ಅಝರಬೈಜಾನ್ ವಿಜಯೋತ್ಸವ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಶರೀಫ್, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಿಟ್ಟ ಹಾಗೂ ನಿರ್ಣಾಯಕ ನಾಯಕತ್ವದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ದಕ್ಷಿಣ ಏಶ್ಯದಲ್ಲಿ ಶಾಂತಿ ಮರುಸ್ಥಾಪನೆಯಾಯಿತು. ಸಂಭಾವ್ಯ ದೊಡ್ಡ ಯುದ್ಧ ತಪ್ಪಿತು ಹಾಗೂ ಲಕ್ಷಾಂತರ ಮಂದಿಯ ಪ್ರಾಣ ಉಳಿಯಿತು” ಎಂದು ಹೇಳಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ತಕ್ಷಣದಿಂದಲೇ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು ಎಂದು ಕಳೆದ ಮೇ 10ರಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೆ ಅವರು ಪದೇ ಪದೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಪರಿಹರಿಸಲು ನಾನು ನೆರವು ನೀಡಿದ್ದೆ ಎಂದು ಪುನರುಚ್ಚರಿಸುತ್ತಲೇ ಬಂದಿದ್ದಾರೆ.
ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಪರಿಹಾರದಲ್ಲಿ ಯಾವುದೇ ಮೂರನೆಯ ವ್ಯಕ್ತಿಯ ಪಾತ್ರವಿರಲಿಲ್ಲ ಎಂದು ಭಾರತ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ.