ರಷ್ಯಾ ಕರಾವಳಿಯಲ್ಲಿ ಪ್ರಬಲ ಭೂಕಂಪ; ಅಲಸ್ಕಾದಲ್ಲಿ ಸುನಾಮಿ ಭೀತಿ
ರಷ್ಯಾ ಕರಾವಳಿಯಲ್ಲಿ 8.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಬುಧವಾರ ಪ್ರಕಟಿಸಿದೆ.
ರಷ್ಯಾದ ಕಮ್ಚಕ್ತಾ ಪರ್ಯಾಯ ದ್ವೀಪದ ಪೆಟ್ರೋಪವಲೋಸ್ಕ್ ನಿಂದ ಪೂರ್ವಕ್ಕೆ 136 ಕಿಲೋಮೀಟರ್ ದೂರದಲ್ಲಿ ಈ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನ 19 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಹೇಳಿದೆ.
ಫೆಸಿಫಿಕ್ ಸಾಗರದಲ್ಲಿ ಸುನಾಮಿ ಉಂಟಾಗುವ ಬಗ್ಗೆ ಅಲಸ್ಕಾ ಸೇರಿದಂತೆ ಹಲವು ಭಾಗಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದುವರೆಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ರಷ್ಯಾ ಬಳಿ ಪ್ರಬಲ ಭೂಕಂಪ ವರದಿಯಾದ ಬೆನ್ನಲ್ಲೇ ಜಪಾನ್ ನ ಹವಾಮಾನ ಇಲಾಖೆ ಕೂಡಾ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ದೇಶದ ಫೆಸಿಫಿಕ್ ತೀರದಲ್ಲಿ ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಹೊಕ್ಕಾಯಿಡೊದಿಂದ 250 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದ್ದು, ಇಲ್ಲಿ ತೀರಾ ಲಘು ಕಂಪನ ಅನುಭವಕ್ಕೆ ಬಂದಿದೆ ಎಂದು ಎನ್ಎಚ್ ಕೆ ಟಿವಿ ಹೇಳಿದೆ. ದೂರದ ಪ್ರದೇಶದಲ್ಲಿ ಆದರೂ ಆಳದಲ್ಲಿ ಸಂಭವಿಸಿದ ಭೂಕಂಪವು ಜಪಾನ್ ನಲ್ಲಿ ಸುನಾಮಿಗೆ ಕಾರಣವಾಗಬಹುದು ಎಂದು ಟೋಕಿಯೊ ವಿಶ್ವವಿದ್ಯಾನಿಲಯದ ಭೂಕಂಪ ಮಾಪನ ಶಾಸ್ತ್ರಜ್ಞ ಶಿನಿಚಿ ಸಕಾಯ್ ಹೇಳಿದ್ದಾರೆ.