×
Ad

ಈಕ್ವೆಡಾರ್ ಜೈಲಿನಲ್ಲಿ ಕೈದಿಗಳ ಗಲಭೆ, ಹಿಂಸಾಚಾರ; ಕನಿಷ್ಠ 31 ಸಾವು; 34 ಮಂದಿಗೆ ಗಾಯ

Update: 2025-11-10 21:56 IST

Photo | AFP

ಕ್ವಿಟೊ, ನ.10: ನೈಋತ್ಯ ಈಕ್ವೆಡಾರ್‍ ನ ಜೈಲಿನಲ್ಲಿ ರವಿವಾರ ನಡೆದ ಹಿಂಸಾತ್ಮಕ ಗಲಭೆಯಲ್ಲಿ ಕನಿಷ್ಠ 27 ಕೈದಿಗಳು ಹಾಗೂ 4 ಸಿಬ್ಬಂದಿಗಳು ಸಾವನ್ನಪ್ಪಿದ್ದು 33 ಕೈದಿಗಳು ಹಾಗೂ ಒಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಾಗಿ ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಎಲ್ ಒರೊ ಪ್ರಾಂತದ ಬಂದರು ಪಟ್ಟಣ ಮಚಾಲಾದಲ್ಲಿನ ಜೈಲಿನಲ್ಲಿ ಗಲಭೆ ನಡೆದಿದ್ದು 27 ಕೈದಿಗಳು ಸಾವನ್ನಪ್ಪಿದ್ದಾರೆ. ಉಸಿರು ಕಟ್ಟುವಿಕೆಯಿಂದ ಕೆಲವು ಸಾವು ಸಂಭವಿಸಿದ್ದರೆ ಮತ್ತೆ ಕೆಲವು ಮೃತದೇಹಗಳು ನೇಣಿಗೇರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಜೈಲಿನ ಅಧಿಕಾರಿಗಳು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಚಾಲಾ ನಗರದ ಜೈಲಿನಿಂದ ಕೆಲವು ಕೈದಿಗಳನ್ನು ಸಮೀಪದ ಪ್ರಾಂತದಲ್ಲಿ ಸರಕಾರ ಹೊಸದಾಗಿ ನಿರ್ಮಿಸಿರುವ, ಅಧಿಕ ಭದ್ರತೆಯ ಜೈಲಿಗೆ ಸ್ಥಳಾಂತರಿಸುವ ಯೋಜನೆಗೆ ಸಂಬಂಧಿಸಿ ಗಲಭೆ ನಡೆದಿದೆ. ಜೈಲಿನೊಳಗಿಂದ ಗುಂಡಿನ ಸದ್ದು, ಸ್ಫೋಟಗಳು, ಸಹಾಯಕ್ಕಾಗಿ ಕೂಗು ಕೇಳಿಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿದ ವರದಿ ಹೇಳಿದೆ.

ತಕ್ಷಣ ವಿಶೇಷ ಪೊಲೀಸ್ ತಂಡ ಜೈಲಿನೊಳಗೆ ಪ್ರವೇಶಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಿದೆ. ಜೈಲಿನೊಳಗೆ ಎರಡು ಗ್ಯಾಂಗ್ ಗಳ ನಡುವೆ ನಡೆದ ಗಲಭೆ ಇದಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟಂಬರ್ ಕೊನೆಯಲ್ಲಿ ಇದೇ ಜೈಲಿನಲ್ಲಿ ನಡೆದಿದ್ದ ಮತ್ತೊಂದು ಸಶಸ್ತ್ರ ದಂಗೆಯಲ್ಲಿ 13 ಕೈದಿಗಳು ಹಾಗೂ ಒಬ್ಬ ಜೈಲು ಸಿಬ್ಬಂದಿ ಸಾವನ್ನಪ್ಪಿದ್ದರು. ಈಕ್ವೆಡಾರ್ ಜೈಲುಗಳನ್ನು ಪ್ರತಿಸ್ಪರ್ಧಿ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ ಗಳು ಕಾರ್ಯಾಚರಣೆಯ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದು ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ನಿಯಂತ್ರಣ ಸಾಧಿಸಲು ಗ್ಯಾಂಗ್‌ ಗಳ ನಡುವೆ ನಡೆಯುವ ಸಂಘರ್ಷದಲ್ಲಿ 500ಕ್ಕೂ ಅಧಿಕ ಕೈದಿಗಳು ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News