ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವಿನ ಬಿಕ್ಕಟ್ಟಿನ ಮಧ್ಯಸ್ಥಿಕೆ ವಹಿಸಲು ರಶ್ಯ ಸಿದ್ಧ: ಪುಟಿನ್ ಘೋಷಣೆ
ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೊ: ಇರಾನ್, ಇಸ್ರೇಲ್ ಹಾಗೂ ಅಮೆರಿಕ ನಡುವೆ ಉದ್ಭವಿಸಿರುವ ಬಿಕ್ಕಟಿನ ಮಧ್ಯಸ್ಥಿಕೆ ವಹಿಸಲು ರಶ್ಯ ಸಿದ್ಧ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪದೇ ಪದೇ ಹೇಳಿದ್ದಾರೆ ಎಂದು ರಶ್ಯ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ದನೋವ್ ತಿಳಿಸಿದ್ದಾರೆ ಎಂದು Al Jazeera ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಪ್ರತಿಯೊಬ್ಬರೂ ಮಸ್ಕತ್‌ನಲ್ಲಿ ಇರಾನ್ ಹಾಗೂ ಅಮೆರಿಕದೊಂದಿಗೆ ಸಂಧಾನ ನಡೆಯುವುದನ್ನು ನಿರೀಕ್ಷಿಸುತ್ತಿದ್ದರು. ನಾವೂ ಕೂಡಾ ಈ ಸಂಧಾನಗಳು ಮುಂದುವರಿಯಬೇಕು ಎಂದು ಬಯಸಿದ್ದೆವು ಹಾಗೂ ನಾವು ಈ ಬಗ್ಗೆ ಭಾರಿ ಭರವಸೆ ಹೊಂದಿದ್ದೆವು. ಆದರೆ, ದುರದೃಷ್ಟವಶಾತ್, ಜೂನ್ 13ರಂದು ನಡೆದ ಇಸ್ರೇಲ್ ದಾಳಿಯಿಂದಾಗಿ ಈ ಪ್ರಕ್ರಿಯೆಗೆ ಅಡ್ಡಿಯುಂಟಾಯಿತು" ಎಂದು ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯಲ್ಲಿ ಅಲ್ ಜಝೀರಾ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಬೊಗ್ದನೊವ್ ತಿಳಿಸಿದ್ದಾರೆ.
"ಹೀಗಿದ್ದೂ, ಇದು ನಮ್ಮೆಲ್ಲ ಭರವಸೆಗಳ ಅಂತ್ಯವಲ್ಲ ಎಂದು ನಾವು ಭಾವಿಸಿದ್ದೇವೆ ಹಾಗೂ ನಮ್ಮ ಬಾಂಧವ್ಯಗಳು ಸುಧಾರಿತವಾಗಿರುವುದರಿಂದ, ಈ ಬಿಕ್ಕಟನಲ್ಲಿ ಭಾಗಿಯಾಗಿರುವವರೆಲ್ಲರೂ ಉಪಯುಕ್ತವೆಂದು ಭಾವಿಸಿದರೆ, ಮಧ್ಯಸ್ಥಿಕೆ ಸೇವೆ ಒದಗಿಸಲು ಸಿದ್ಧರಿದ್ದೇವೆ" ಎಂದು ಅವರು ಘೋಷಿಸಿದ್ದಾರೆ.
"ನಮಗೆ ಈ ಸಮಸ್ಯೆಗೆ ಬೇರಾವ ಪರಿಹಾರವೂ ತೋಚರಿದಿರುವುದರಿಂದ, ಕೊಲ್ಲಿಯ ನಮ್ಮ ಮಿತ್ರರೂ ಈ ಕೆಲಸವನ್ನು ಮಾಡಲು ಸಿದ್ಧರಿದ್ದಾರೆ ಎಂದು ನಾವು ಭಾವಿಸಿದ್ದೇವೆ" ಎಂದೂ ಅವರು ಹೇಳಿದ್ದಾರೆ.