ತಾರತಮ್ಯವಾದಿ ನಿರ್ಬಂಧಗಳಿಗೆ ರಶ್ಯ-ಚೀನಾ ವಿರೋಧ: ಪುಟಿನ್
ಅಮೆರಿಕದ ಸುಂಕಾಸ್ತ್ರಕ್ಕೆ ಪರೋಕ್ಷ ಟೀಕೆ
ವ್ಲಾದಿಮಿರ್ ಪುಟಿನ್ | PC : @BRICSinfo
ಹೊಸದಿಲ್ಲಿ,ಆ.31: ಬ್ರಿಕ್ಸ್ ಸಮೂಹದ ಸದಸ್ಯ ರಾಷ್ಟ್ರಗಳ ಸಾಮಾಜಿಕ ಹಾಗೂ ಅರ್ಥಿಕ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುವ ತಾರತಮ್ಯವಾದಿ ನಿರ್ಬಂಧಗಳ ವಿರುದ್ಧ ರಶ್ಯ ಹಾಗೂ ಚೀನಾ ಸಮಾನ ನಿಲುವನ್ನು ಹೊಂದಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರವಿವಾರ ತಿಳಿಸಿದ್ದಾರೆ.
ಶಾಂಘೈ ಸಹಕಾರಿ ಶೃಂಗಸಭೆ (ಎಸ್‌ಸಿಓ)ಯಲ್ಲಿ ಪಾಲ್ಗೊಳ್ಳಲು ತಿಯಾನ್‌ಜಿನ್‌ಗೆ ಆಗಮಿಸಿರುವ ಪುಟಿನ್ ಅವರು, ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನುವಾಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ.
ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ರಶ್ಯ ಹಾಗೂ ಚೀನಾ ದೇಶಗಳೆರಡೂ ವಿಶೇಷ ಆಸಕ್ತಿ ವಹಿಸಿವೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವ ಬ್ರಿಕ್ಸ್ ನ ಸಾಮರ್ಥ್ಯವನ್ನು ಬಲಪಡಿಸಲು ಒಗ್ಗೂಡಿವೆ ಎಂದು ಪುಟಿನ್ ಹೇಳಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳಿಗೆ ಶೇ.10ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪುಟಿನ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಜಂಎಫ್) ಹಾಗೂ ವಿಶ್ವಬ್ಯಾಂಕ್ ನ ಸುಧಾರಣೆಯನ್ನು ರಶ್ಯ ಹಾಗೂ ಚೀನಾ ಬೆಂಬಲಿಸುವುದೆಂದು ಪುಟಿನ್ ಅವರು ಕ್ಸಿನುವಾಗಿ ನೀಡಿದ ಲಿಖಿತ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬ್ರಿಕ್ಸ್ ಒಕ್ಕೂಟವು ಬ್ರೆಝಿಲ್, ರಶ್ಯ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿವೆ. ಸೌದಿ ಆರೇಬಿಯ, ಇರಾನ್, ಇಥಿಯೋಪಿಯಾ, ಈಜಿಪ್ಟ್, ಅರ್ಜೆಂಟೀನಾ ಹಾಗೂ ಯುಎಇ ಕೂಡಾ ನೂತನ ಸದಸ್ಯರಾಗಿ ಸೇರ್ಪಡೆಗೊಂಡಿವೆ.