ಟೊಮಾಹಾಕ್ ಕ್ಷಿಪಣಿ ರಶ್ಯಕ್ಕೆ ಅಪ್ಪಳಿಸಿದರೆ ಗಂಭೀರ, ವಿನಾಶಕಾರಿ ಪ್ರತಿಕ್ರಿಯೆ : ಅಮೆರಿಕಾಕ್ಕೆ ಪುಟಿನ್ ಎಚ್ಚರಿಕೆ
ವ್ಲಾದಿಮಿರ್ ಪುಟಿನ್ |Photo Credit : PTI
ಮಾಸ್ಕೋ, ಅ.24: ಉಕ್ರೇನ್‍ಗೆ ಟೊಮಾಹಾಕ್ ಕ್ಷಿಪಣಿಗಳನ್ನು ಪೂರೈಸುವುದರ ವಿರುದ್ಧ ಅಮೆರಿಕಾಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದು, ಈ ಕ್ಷಿಪಣಿ ಒಂದು ವೇಳೆ ರಶ್ಯದ ಪ್ರದೇಶಕ್ಕೆ ಅಪ್ಪಳಿಸಿದರೆ ಅದಕ್ಕೆ ಗಂಭೀರ ಮತ್ತು ವಿನಾಶಕಾರಿ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಕ್ಷಿಪಣಿ ಪೂರೈಕೆ ಉಲ್ಬಣಗೊಳಿಸುವ ಪ್ರಯತ್ನವಾಗಿದೆ. ಒಂದು ವೇಳೆ ಇಂತಹ ಆಯುಧಗಳಿಂದ ರಶ್ಯದ ಭೂಪ್ರದೇಶದ ಮೇಲೆ ದಾಳಿ ನಡೆದರೆ ಪ್ರತಿಕ್ರಿಯೆ ಗಂಭೀರ ರೀತಿಯಲ್ಲಿರುತ್ತದೆ. ಈ ಬಗ್ಗೆ ಅವರು ಯೋಚಿಸಲಿ. ಯಾವುದೇ ವಿವಾದ, ವಿಶೇಷವಾಗಿ ಯುದ್ಧದ ಸಂದರ್ಭ ಸಂಘರ್ಷಕ್ಕಿಂತ ಯಾವತ್ತೂ ಮಾತುಕತೆ ಉತ್ತಮ. ಮಾತುಕತೆ ಮುಂದುವರಿಯುವುದನ್ನು ನಾವು ಯಾವತ್ತೂ ಬೆಂಬಲಿಸಿದ್ದೇವೆ' ಎಂದು ಪುಟಿನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
1,500 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ ಮತ್ತು ಗರಿಷ್ಠ ನಿಖರತೆಯನ್ನು ಹೊಂದಿರುವ ಟೊಮಾಹಾಕ್ ಕ್ಷಿಪಣಿಗಳನ್ನು ಉಕ್ರೇನ್‍ಗೆ ಪೂರೈಸುವ ಸಾಧ್ಯತೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹುತೇಕ ತಳ್ಳಿಹಾಕಿರುವುದಾಗಿ ವರದಿಯಾಗಿದೆ. `ಈ ಕ್ಷಿಪಣಿಗಳನ್ನು ಹೇಗೆ ಬಳಸಬೇಕೆಂದು ತಿಳಿಯಲು ಸಾಮಾನ್ಯವಾಗಿ ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಇವು ಅತ್ಯಂತ ಸಂಕೀರ್ಣವಾಗಿದೆ. ಆದ್ದರಿಂದ ನಾವು ಉಡಾಯಿಸಿದರೆ ಮಾತ್ರ ಟಾಮ್‍ಹಾಕ್ ಕ್ಷಿಪಣಿ ಪ್ರಯೋಜನಕ್ಕೆ ಬರುತ್ತದೆ. ಆದರೆ ನಾವು ಅದನ್ನು ಮಾಡುವುದಿಲ್ಲ. ಅದನ್ನು ಹೇಗೆ ಬಳಸುವುದೆಂದು ಇತರರಿಗೆ ಕಲಿಸಲು ನಾವು ಸಿದ್ಧವಿಲ್ಲ' ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.