ನಿರ್ಬಂಧಗಳ ಒತ್ತಡ: ರಶ್ಯದಿಂದ ಭಾರತಕ್ಕೆ ಕಚ್ಚಾತೈಲವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಯೂ-ಟರ್ನ್
ಸಾಂದರ್ಭಿಕ ಚಿತ್ರ | Photo Credit : freepik.com
ಮಾಸ್ಕೋ, ಅ.29: ರಶ್ಯದ ಮೇಲಿನ ನಿರ್ಬಂಧವನ್ನು ಅಮೆರಿಕ ಬಿಗಿಗೊಳಿಸಿರುವಂತೆಯೇ ರಶ್ಯದ ಕಚ್ಚಾ ತೈಲವನ್ನು ಹೊತ್ತು ಭಾರತಕ್ಕೆ ಹೋಗುತ್ತಿದ್ದ ಟ್ಯಾಂಕರ್ ಬಾಲ್ಟಿಕ್ ಸಮುದ್ರದಲ್ಲಿ ಯೂ-ಟರ್ನ್ ಹೊಡೆದು ದಿಕ್ಕು ಬದಲಿಸಿರುವ ಘಟನೆ ವರದಿಯಾಗಿದೆ.
`ಫ್ಯುರಿಯಾ' ಹಡಗು ಭಾರತದತ್ತ ಚಲಿಸುತ್ತಿತ್ತು, ಆದರೆ ಡೆನ್ಮಾರ್ಕ್ ಮತ್ತು ಜರ್ಮನಿಯ ಬಳಿ ಯೂ-ಟರ್ನ್ ಹೊಡೆದಿದ್ದು ಈಗ ಬಾಲ್ಟಿಕ್ ಸಮುದ್ರದಲ್ಲಿ ನಿಧಾನವಾಗಿ ಚಲಿಸುತ್ತಿದೆ. ಟ್ಯಾಂಕರ್ ನಲ್ಲಿ ರಶ್ಯದ ಪ್ರಿಮೋಸ್ರ್ಕ್ ಬಂದರಿನಿಂದ ಅಕ್ಟೋಬರ್ 20ರಂದು ಲೋಡ್ ಮಾಡಲಾದ ಸುಮಾರು 7,30,000 ಬ್ಯಾರೆಲ್ ನಷ್ಟು ಕಚ್ಚಾ ತೈಲವಿದ್ದು ಇದನ್ನು ಗುಜರಾತಿನ ಸಿಕ್ಕಾ ಬಂದರಿಗೆ ಸಾಗಿಸಲಾಗುತ್ತಿತ್ತು. ಆದರೆ ಇದೀಗ ಈಜಿಪ್ಟ್ನ ಸೈದ್ ಬಂದರಿನತ್ತ ಪಥ ಬದಲಾಯಿಸಿರುವುದಾಗಿ ವರದಿಯಾಗಿದೆ. ರಶ್ಯದ ಪ್ರಮುಖ ತೈಲ ಕಂಪನಿಗಳಾದ ರೊಸ್ನೆಟ್ ಮತ್ತು ಲುಕೋಯಿಲ್ ಮೇಲೆ ಅಮೆರಿಕಾ ನಿರ್ಬಂಧ ಜಾರಿಗೊಳಿಸಿರುವುದು ರಶ್ಯದಿಂದ ಡಿಸ್ಕೌಂಟ್ ದರದಲ್ಲಿ ತೈಲ ಖರೀದಿಸಲು ಭಾರತಕ್ಕೆ ಸಮಸ್ಯೆಯಾಗುತ್ತಿದೆ.