ಉಕ್ರೇನ್ ರೈಲು ನಿಲ್ದಾಣದ ಮೇಲೆ ರಶ್ಯ ಡ್ರೋನ್ ದಾಳಿ: ಕನಿಷ್ಠ 30 ಮಂದಿಗೆ ಗಾಯ
Photo : Prosecutor General's Office via Telegram/Handout via Reuters
ಕೀವ್, ಅ.4: ಈಶಾನ್ಯ ಉಕ್ರೇನ್‌ನ ಸುಮಿ ಪ್ರಾಂತದಲ್ಲಿ ರೈಲು ನಿಲ್ದಾಣದ ಮೇಲೆ ರಶ್ಯ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 30 ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶನಿವಾರ ಹೇಳಿದ್ದಾರೆ.
2022ರ ಫೆಬ್ರವರಿಯಲ್ಲಿ ಆಕ್ರಮಣ ಆರಂಭಿಸಿದಂದಿನಿಂದ ರಶ್ಯದ ಸೇನೆ ಪದೇ ಪದೇ ಉಕ್ರೇನ್‌ನ ರೈಲ್ವೇ ಮೂಲಸೌಕರ್ಯವನ್ನು ಗುರಿಯಾಗಿಸುತ್ತಿದೆ. ` ಸುಮಿ ಪ್ರಾಂತದ ಶೊಸ್ಟಿಕಾ ರೈಲ್ವೇ ನಿಲ್ದಾಣದ ಮೇಲೆ ರಶ್ಯದ ಕ್ರೂರ, ಅನಾಗರಿಕ ಡ್ರೋನ್ ದಾಳಿಯಲ್ಲಿ ಪ್ರಯಾಣಿಕರು, ರೈಲ್ವೇ ಸಿಬ್ಬಂದಿ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದವರು ದಾಳಿಯಲ್ಲಿ ಹಾನಿಗೊಳಗಾದ ರೈಲು ನಿಲ್ದಾಣದ ವೀಡಿಯೊ ಸಹಿತ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಶನಿವಾರ ಬೆಳಿಗ್ಗೆ ರಶ್ಯದ ಸೇನೆ ನಡೆಸಿದ ಮತ್ತೊಂದು ಸರಣಿ ದಾಳಿಯಲ್ಲಿ ಉತ್ತರದ ಚೆರ್ನಿಗಿವ್ ಪ್ರಾಂತದಲ್ಲಿ ಸುಮಾರು 50,000 ಮನೆಗಳಿಗೆ ವಿದ್ಯುತ್ ಸಂಪರ್ಕ ಮೊಟಕುಗೊಂಡಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ರಶ್ಯದ ವಾಯವ್ಯ ಲೆನಿನ್ಗ್ರಾಡ್ ಪ್ರಾಂತದಲ್ಲಿ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ಸೇನೆ ಹೇಳಿದೆ.