×
Ad

ಸಂಘರ್ಷ ಶಮನಕ್ಕೆ ಸೆನೆಟ್ ನಕಾರ, ಇರಾನ್ ನೌಕಾಪಡೆ ಸರ್ವನಾಶ: ಟ್ರಂಪ್

Update: 2026-03-06 08:02 IST

PC: x.com/MarioNawfal

ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಸಾರಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಕ್ಷಿಪಣಿ ದಾಳಿ, ನೌಕಾ ದಾಳಿ ಹಾಗೂ ಪ್ರಾದೇಶಿಕವಾಗಿ ಯುದ್ಧ ವಿಸ್ತರಣೆಯಿಂದಾಗಿ ಮಧ್ಯಪ್ರಾಚ್ಯ ಪ್ರದೇಶ ಇತ್ತೀಚಿನ ದಶಕಗಳಲ್ಲೇ ಅತ್ಯಂತ ಚಂಚಲ ಸಂಘರ್ಷವನ್ನು ಎದುರಿಸುತ್ತಿದೆ. ಇರಾನ್ ಏತನ್ಮಧ್ಯೆ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದ್ದರೆ, ಇಸ್ರೇಲ್ ಸೇನೆ ಲೆಬನಾನ್ ನ ಹಿಝ್ಬುಲ್ಲಾ ನೆಲೆಗಳ ಮೇಲಿನ ವಾಯುದಾಳಿ ಮುಂದುವರಿಸಿದೆ. ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಸಬ್‌ಮರಿನ್ ಇರಾನ್ ನ ಯುದ್ಧನೌಕೆಯನ್ನು ಮುಳುಗಿಸಿದೆ.

ಈಗಾಗಲೇ ಸಾವಿನ ಸಂಖ್ಯೆ ಸಾವಿರ ದಾಟಿದ್ದು, ಲೆಬನಾನ್ ಹಾಗೂ ಇಸ್ರೇಲ್ ನಲ್ಲೂ ಹತ್ತಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇರಾನ್ ನ ಮೇಲೆ ಬಾಂಬ್ ಮಳೆಗೆರೆಯಲಾಗುತ್ತಿದ್ದು, ಆಯಾತುಲ್ಲಾ ಅಲಿ ಖಾಮಿನೈ ಅವರ ಉತ್ತರಾಧಿಕಾರಿಗಾಗಿ ಶೋಧ ಮುಂದುವರಿದಿದೆ. ಸಾವಿರಾರು ಮಂದಿ ರಾಜಧಾನಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಅಮೆರಿಕದ ಯುದ್ಧಾಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಸೆನೆಟ್ ರಿಪಬ್ಲಿಕನ್ನರು ತಡೆಯುವ ಮೂಲಕ ಕಾರ್ಯಾಚರಣೆ ಮುಂದುವರಿಸಲು ರಾಜಕೀಯ ಬೆಂಬಲದ ಸುಳಿವು ಲಭ್ಯವಾಗಿದೆ.

ಈ ಸಂಘರ್ಷ ಜಾಗತಿಕ ವ್ಯಾಪಾರ ಮತ್ತು ಇಂಧನ ಪೂರೈಕೆಯನ್ನು ಅಸ್ತವ್ಯಸ್ತಗಳಿಸಿದೆ. ಹೊರ್ಮುಜ್ ಸಂಧಿಯ ಸುತ್ತ ಮುತ್ತ ನಡೆಯುತ್ತಿರುವ ಕ್ಷಿಪಣಿ ದಾಳಿಯಿಂದಾಗಿ ಟ್ಯಾಂಕರ್ ಗಳ ಸಂಚಾರ ವಿರಳವಾಗುತ್ತಿದೆ. ತೈಲಬೆಲೆ ಹೆಚ್ಚುತ್ತಿದ್ದು, ಹಣಕಾಸು ಮಾರುಕಟ್ಟೆಗಳಲ್ಲಿ ತಳಮಳ ಆರಂಭವಾಗಿದೆ. ಶಿಪ್ಪಿಂಗ್ ಕಂಪನಿಗಳು ಭದ್ರತಾ ಅಪಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ರದ್ದುಪಡಿಸುತ್ತಿವೆ.

ಇತ್ತೀಚಿನ ಬೆಳವಣಿಗೆಯಲ್ಲಿ ರಾಜಧಾನಿ ಮನಾಮಾದಲ್ಲಿ ಎರಡು ಹೋಟೆಲ್ ಗಳು ಹಾಗೂ ವಸತಿ ಕಟ್ಟಡಗಳನ್ನು ಗುರಿ ಮಾಡಿ ಇರಾನ್ ದಾಳಿ ನಡೆಸಿದ್ದಾಗಿ ಬಹರೈನ್ ಶುಕ್ರವಾರ ಮುಂಜಾನೆ ಪ್ರಕಟಿಸಿದೆ. ರಕ್ಷಣಾ ಸಚಿವಾಲಯದ ಇತ್ತೀಚಿನ ಎಕ್ಸ್ ಪೋಸ್ಟ್ ನಲ್ಲಿ ದಾಳಿಯಿಂದ ಭೌತಿಕ ಹಾನಿಯಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಭೀಕರ ಸಂಘರ್ಷದಲ್ಲಿ ಇರಾನ್ ನ ನೌಕಾಪಡೆ ಸರ್ವನಾಶವಾಗಿದ್ದು, ಕಳೆದ ಮೂರು ದಿನಗಳಲ್ಲಿ 24 ಹಡಗುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News