ಪ್ರತಿಭಟನಾಕಾರರ ಮೇಲೆ ಗುಂಡಿಕ್ಕಲು ಆದೇಶಿಸಿದ್ದ ಶೇಖ್ ಹಸೀನಾ: ವರದಿ
PC : PTI
ಢಾಕ: ಬಾಂಗ್ಲಾದೇಶದಲ್ಲಿ 2024ರಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಆಗಿನ ಪ್ರಧಾನಿ ಶೇಖ್ ಹಸೀನಾ ಪ್ರತಿಭಟನಾಕಾರರನ್ನು ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದ್ದರು ಎಂದು ಸೋರಿಕೆಯಾದ ವೀಡಿಯೊ ದಾಖಲೆಗಳನ್ನು ಆಧರಿಸಿ ಬಿಬಿಸಿ ವರದಿ ಮಾಡಿದೆ.
`ಅವರು(ಪ್ರತಿಭಟನಾಕಾರರು) ಕಂಡರೆ ಗುಂಡಿಕ್ಕಿ' ಎಂದು ಹಸೀನಾ ಭದ್ರತಾ ಪಡೆಗಳಿಗೆ ಆದೇಶಿಸಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ ಎಂದು ವರದಿ ಹೇಳಿದೆ. ಢಾಕಾದಲ್ಲಿ ಪ್ರಧಾನಿಯ ಸರ್ಕಾರಿ ನಿವಾಸದಿಂದ 2024ರ ಜುಲೈ 18ರಂದು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ್ದ ಹಸೀನಾ `ಇವತ್ತು ರಾತ್ರಿಯೇ ಅವರೆಲ್ಲರನ್ನೂ ಬಂಧಿಸಬೇಕು. ಎಲ್ಲ ಸಿಬ್ಬಂದಿಗಳಿಗೂ ಮಾಹಿತಿ ನೀಡಿ. ಪ್ರತಿಭಟನಾಕಾರರು ಕಂಡರೆ ಗುಂಡಿಕ್ಕಿ' ಎಂದು ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಕನಿಷ್ಠ 1,400 ಮಂದಿ ಮೃತಪಟ್ಟಿದ್ದರು.
ಬಿಬಿಸಿ ವರದಿಯಲ್ಲಿ ಉಲ್ಲೇಖಿಸಿರುವ ವೀಡಿಯೊ ಸಂಭಾಷಣೆಯನ್ನು ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಕ್ತಾರ ನಿರಾಕರಿಸಿದ್ದಾರೆ.