ಪೆನ್ಸಿಲ್ವೇನಿಯಾದಲ್ಲಿ ಶೂಟೌಟ್: ಮೂವರು ಪೊಲೀಸ್ ಅಧಿಕಾರಿಗಳು ಮೃತ್ಯು
PC: x.com/BharatjournalX
ಪೆನ್ಸಿಲ್ವೇನಿಯಾ, ಅಮೆರಿಕ: ಆಗಂತುಕ ವ್ಯಕ್ತಿಯೊಬ್ಬ ಬುಧವಾರ ದಕ್ಷಿಣ ಪೆನ್ಸಿಲ್ವೇನಿಯಾ ಪೊಲೀಸ್ ಅಧಿಕಾರಿಗಳತ್ತ ಗುಂಡು ಹಾರಿಸಿದ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಹಿಂದಿನ ದಿನ ಆರಂಭಿಸಿದ್ದ ತನಿಖೆಯೊಂದನ್ನು ಮುಂದುವರಿಸುವ ಸಲುವಾಗಿ ಪೊಲೀಸ್ ಅಧಿಕಾರಿಗಳ ತಂಡ ಆಗಮಿಸಿತ್ತು. "ದೇಶಕ್ಕಾಗಿ ಸೇವೆ ಸಲ್ಲಿಸಿದ ಮೂರು ಅಮೂಲ್ಯ ಆತ್ಮಗಳ ನಷ್ಟಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತಿದ್ದೇವೆ" ಎಂದು ಗವರ್ನರ್ ಜೋಶ್ ಶಪಿರೊ ಹೇಳಿದ್ದಾರೆ.
ಫಿಲಿಡೆಲ್ಫಿಯಾದಿಂದ 185 ಕಿಲೋಮೀಟರ್ ದೂರದ ಉತ್ತರ ಕೊಡೊರಸ್ ಉಪನಗರದಲ್ಲಿ ಈ ಘಟನೆ ಸಂಭವಿಸಿದೆ. ಈ ವಿಚಾರದ ಬಗ್ಗೆ ಸಮಗ್ರ, ನ್ಯಾಯಸಮ್ಮತ ತನಿಖೆ ಪೂರ್ಣಗೊಳ್ಳುವವರೆಗೂ ವಿರಮಿಸುವುದಿಲ್ಲ ಎಂದು ರಾಜ್ಯ ಪೊಲೀಸ್ ಆಯುಕ್ತ ಕ್ರಿಸ್ಟೋಫರ್ ಪ್ಯಾರೀಸ್ ಗುಡುಗಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ ಎಂದು ಯಾರ್ಕ್ ಆಸ್ಪತ್ರೆ ಹೇಳಿಕೆ ನೀಡಿದೆ.
ದಾಳಿಕೋರ ಇನ್ನೂ ಪತ್ತೆಯಾಗಿಲ್ಲ ಹಾಗೂ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆಯೂ ಯಾವುದೇ ಅಧಿಕೃತ ವಿವರ ಲಭ್ಯವಾಗಿಲ್ಲ. ತನಿಖೆ ಮುಂದುವರಿದಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವುದು ಅಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.