ದಕ್ಷಿಣ ಚೀನಾಕ್ಕೆ ಅಪ್ಪಳಿಸಿದ ಚಂಡಮಾರುತ : 20 ಲಕ್ಷ ಜನರ ಸ್ಥಳಾಂತರ
Update: 2025-09-24 19:51 IST
PC : X
ಬೀಜಿಂಗ್, ಸೆ.24: ರಾಗಸ ಚಂಡಮಾರುತ ಬುಧವಾರ ಸಂಜೆ ದಕ್ಷಿಣ ಚೀನಾದ ಹೈಲಿಂಗ್ ದ್ವೀಪದ ಮೂಲಕ ಸಾಗಿಬಂದು ಗುವಾಂಗ್‍ಡಾಂಗ್ ಪ್ರಾಂತದ ಯಾಂಜಿಯಾಂಗ್ ನಗರಕ್ಕೆ ಅಪ್ಪಳಿಸಿದ್ದು ಸುಮಾರು 20 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿರುವುದಾಗಿ ವರದಿಯಾಗಿದೆ.
ತೈವಾನ್‍ನಿಂದ ದಾಟಿ ಬಂದ ಬಳಿಕ ಚಂಡಮಾರುತದ ತೀವ್ರತೆ ಸ್ವಲ್ಪ ಕಡಿಮೆಗೊಂಡಿದ್ದರೂ ಆಗ್ನೇಯ ಪ್ರಾಂತದ ತೈಷಾನ್ ಕೌಂಟಿಯಲ್ಲಿ ಗಂಟೆಗೆ 241 ಕಿ.ಮೀ ವೇಗದ ಸುಂಟರಗಾಳಿ ಬೀಸುತ್ತಿದೆ.
ಹಾಂಕಾಂಗ್‍ನಲ್ಲಿ ಚಂಡಮಾರುತದ ಅಬ್ಬರದಿಂದ ಸುಮಾರು 90 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ದಕ್ಷಿಣ ಚೀನಾದ ನಗರಗಳಾದ ಝುಹೆಯ್, ಶೆನ್ಜೆನ್ ಮತ್ತು ಗುವಾಂಗ್‍ಜೊವ್ ನಗರಗಳಲ್ಲಿ ಚಂಡಮಾರುತದ ಅಬ್ಬರ ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.