ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಭಿಸುವ ವಿಶೇಷ ಸೌಲಭ್ಯಗಳನ್ನು ಪಡೆಯುವುದಿಲ್ಲ : ಚೀನಾ ಘೋಷಣೆ
ನ್ಯೂಯಾರ್ಕ್, ಸೆ.24: ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ)ಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಭಿಸುವ ಸೌಲಭ್ಯಗಳನ್ನು ಚೀನಾ ಇನ್ನು ಮುಂದೆ ಪಡೆಯುವುದಿಲ್ಲ ಎಂದು ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್ ನ್ಯೂಯಾರ್ಕ್‍ನಲ್ಲಿ ಮಂಗಳವಾರ ಘೋಷಿಸಿದ್ದಾರೆ.
ಇದರೊಂದಿಗೆ ಡಬ್ಲ್ಯೂಟಿಒ ಸುಧಾರಣೆಯ ಕುರಿತು ಅಮೆರಿಕಾದೊಂದಿಗಿನ ಒಪ್ಪಂದಕ್ಕೆ ಅಡ್ಡಿಯಾಗಿದ್ದ ವಿವಾದದ ಅಂಶವನ್ನು ಚೀನಾ ತೆಗೆದು ಹಾಕಿದಂತಾಗಿದೆ. ಯಾವುದೇ ಪ್ರಸ್ತುತ ಅಥವಾ ಭವಿಷ್ಯದ ಡಬ್ಲ್ಯೂಟಿಒ ಮಾತುಕತೆಗಳಲ್ಲಿ ದೇಶವು `ವಿಶೇಷ ಮತ್ತು ಭೇದಾತ್ಮಕ' ಹಕ್ಕುಗಳನ್ನು ಪಡೆಯುವುದನ್ನು ನಿಲ್ಲಿಸುತ್ತದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ನಿರ್ಧಾರವನ್ನು ಡಬ್ಲ್ಯೂಟಿಒ ಪ್ರಧಾನ ನಿರ್ದೇಶಕ ಎಂಗೋಝಿ ಒಕೊಂಜೊ-ಇವೆಲಾ ಸ್ವಾಗತಿಸಿದ್ದು ಇದು ಹಲವು ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ' ಎಂದು ಬಣ್ಣಿಸಿದ್ದು ಚೀನಾದ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಥಾನಮಾನವು ಸ್ವಯಂ ಘೋಷಿತ ಪ್ರಕ್ರಿಯೆಯಾಗಿದ್ದು ಡಬ್ಲ್ಯೂಟಿಒ ಸದಸ್ಯರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಚೀನಾ ಈ ಹಿಂದಿನಿಂದಲೂ ತನ್ನನ್ನು ವಿಶ್ವದ ಅತೀ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಿತ್ತು. 4 ದಶಕಗಳ ರೂಪಾಂತರವು ಚೀನಾವನ್ನು ವಿಶ್ವದ ಅತೀ ದೊಡ್ಡ ವ್ಯಾಪಾರ ಮತ್ತು ಉತ್ಪಾದನಾ ಆರ್ಥಿಕತೆಯಾಗಿ ಪರಿವರ್ತಿಸಿದ ಹೊರತಾಗಿಯೂ ವಿಶ್ವಸಂಸ್ಥೆಯು ಈಗಲೂ ಚೀನಾವನ್ನು `ಅಭಿವೃದ್ಧಿಶೀಲ ರಾಷ್ಟ್ರ'ವೆಂದು ವರ್ಗೀಕರಿಸಿದೆ. ಡಬ್ಲ್ಯೂಟಿಒದಲ್ಲಿ ಚೀನಾದ ಸ್ಥಾನಮಾನದ ವಿಷಯವು ಡಬ್ಲ್ಯೂಟಿಒ ಸುಧಾರಣೆಯ ಪ್ರಕ್ರಿಯೆಗೆ ಬಹುದೊಡ್ಡ ತೊಡಕಾಗಿತ್ತು. ಅಮೆರಿಕಾ-ಚೀನಾ ನಡುವಿನ ವ್ಯಾಪಾರ ಮಾತುಕತೆಯ ಹಿನ್ನೆಲೆಯಲ್ಲಿ ಈ ನಡೆ ಮಹತ್ವದ್ದಾಗಿದೆ.