ಖಾಮಿನೈ ಪದತ್ಯಾಗಕ್ಕೆ ಗಡೀಪಾರುಗೊಂಡ ಇರಾನ್ ನ ʼಯುವರಾಜʼ ಆಗ್ರಹ
ರೆಝಾ ಪಹಲ್ವಿ (Photo: X/@PahlaviReza)
ಟೆಹರಾನ್: ಇರಾನ್‍ನಲ್ಲಿ ಪ್ರಸಕ್ತ ಆಡಳಿತ ಯಾರಿಗೂ ಒದಗಿಸದ ನ್ಯಾಯಸಮ್ಮತ ವಿಚಾರಣೆ ಎದುರಿಸಬೇಕಾದರೆ ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ತಕ್ಷಣ ರಾಜೀನಾಮೆ ನೀಡಬೇಕು ಎಂದು ಇರಾನ್‍ನ ಕೊನೆಯ ದೊರೆಯ ಪುತ್ರ ಹಾಗೂ ಗಡೀಪಾರುಗೊಂಡಿರುವ ರೆಝಾ ಪಹಲ್ವಿ ಆಗ್ರಹಿಸಿದ್ದಾರೆ.
ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧ ಎಂದು ಘೋಷಿಸಿರುವ ಅವರು, ಸರ್ವಾಧಿಕಾರಿಯನ್ನು ಕಿತ್ತೊಗೆಯಲು ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮತ್ತು ದೇಶವನ್ನು ಮುಕ್ತ ಹಾಗೂ ಪ್ರಜಾಸತ್ತಾತ್ಮಕ ಭವಿಷ್ಯದ ದಾರಿಯಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿನ ಭಿನ್ನಮತ ಮತ್ತು ಆಂತರಿಕ ವಿರೋಧಿಗಳಿಗೆ ಹೊಸ ಸುರಕ್ಷಿತ ವೇದಿಕೆ ನಿರ್ಮಿಸಲು ಸಿದ್ಧ ಎಂದು ಹೇಳಿದ್ದಾರೆ.
"ನಾವು ಹೆಮ್ಮೆಯ, ಪ್ರಾಚೀನ ಮತ್ತು ಪುಟಿದೇಳಬಲ್ಲವರು" ಎಂದು ಪ್ಯಾರೀಸ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಹಲ್ವಿ ಹೇಳಿದರು. "ಇದು ನಮ್ಮ ಕ್ಷಣ. ನಾನು ನಿಮ್ಮ ಜತೆಗಿದ್ದೇನೆ. ಎಲ್ಲರೂ ಒಟ್ಟಾಗಿ ಹೊಸ ಇರಾನ್ ಕಟ್ಟೋಣ ಎನ್ನುವುದನ್ನು ನನ್ನ ದೇಶಬಾಂಧವರಿಗೆ ನಾನು ಹೇಳಬಯಸುತ್ತೇನೆ" ಎಂದು ವಿವರಿಸಿದರು.
"ಈ ಮೂಲಕ ಇಂದು ಶಾಂತಿಯ ಹಾದಿಯಲ್ಲಿ ಮುನ್ನಡೆಯುವಂತೆ ದೇಶಬಾಂಧವರಿಗೆ ಕರೆ ನೀಡುತ್ತಿದ್ದೇನೆ" ಎಂದು ಹೇಳಿದರು.
ಇರಾನ್‍ನ ಎಲ್ಲ ವರ್ಗದ ಜನತೆಯ ಜತೆ ನಾನು ಮಾತನಾಡಿದ್ದೇನೆ. ನಾವೀಗ ಮಹತ್ವದ ತಿರುವಿನ ಘಟ್ಟದಲ್ಲಿದ್ದೇವೆ. ಒಂದು ದಾರಿ ರಕ್ತಪಾತ ಮತ್ತು ಅರಾಜಕತೆಯತ್ತ ಸಾಗುತ್ತದೆ. ಮತ್ತೊಂದು ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ವರ್ಗಾಂತರಕ್ಕೆ ಕಾರಣವಾಗುತ್ತದೆ" ಎಂದು ಮಾರ್ಮಿಕವಾಗಿ ನುಡಿದರು.