ಸುಡಾನ್ ನಲ್ಲಿ ನಾಗರಿಕರ ವಿರುದ್ಧ ದೌರ್ಜನ್ಯಕ್ಕೆ ವಿಶ್ವಸಂಸ್ಥೆ ಕಳವಳ
Photo Credit : United Nations
ನ್ಯೂಯಾರ್ಕ್, ಅ.31: ಸುಡಾನ್ ನ ಉತ್ತರ ದಾರ್ಫುರ್ ಪ್ರಾಂತದಲ್ಲಿ ಮುತ್ತಿಗೆಗೆ ಒಳಗಾಗಿರುವ ಅಲ್-ಫಶರ್ ನಗರದ ಮೇಲೆ ಅರೆ ಸೇನಾಪಡೆ ನಡೆಸಿದ ಭಯಾನಕ ಆಕ್ರಮಣದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದು ನಾಗರಿಕರ ವಿರುದ್ಧದ ದೌರ್ಜನ್ಯಗಳು ದೊಡ್ಡ ಪ್ರಮಾಣದ, ಜನಾಂಗೀಯವಾಗಿ ಪ್ರೇರೇಪಿಸಲ್ಪಟ್ಟ ಹತ್ಯೆಗಳಾಗಿ ಹೊರಹೊಮ್ಮುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದೆ.
ಅರೆ ಸೇನಾಪಡೆಯ(ರ‍್ಯಾಪಿಡ್ ಸಪೋರ್ಟ್ ಫೋರ್ಸ್) ದಾಳಿಯನ್ನು ಮತ್ತು ದಾಳಿಯಿಂದ ಸುಡಾನ್ ನ ನಾಗರಿಕ ಜನಸಂಖ್ಯೆಯ ಮೇಲೆ ಆಗುವ ವಿನಾಶಕಾರಿ ಪರಿಣಾಮವನ್ನು ಭದ್ರತಾ ಮಂಡಳಿಯ ಸದಸ್ಯರು ಒಮ್ಮತದಿಂದ ಖಂಡಿಸಿದ್ದು ಅರೆ ಸೇನಾಪಡೆಯು ಅಲ್ ಫಶರ್ ನಗರದಿಂದ ಹಿಂದೆ ಸರಿಯುವಂತೆ ಆಗ್ರಹಿಸುವ 2024ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದಿಸಿದ ನಿರ್ಣಯವನ್ನು ಪುನರುಚ್ಚರಿಸಿದ್ದಾರೆ.
ಅರೆ ಸೇನಾಪಡೆಯ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಸಮಾನಾಂತರ ಆಡಳಿತ ವ್ಯವಸ್ಥೆಗೆ ಭದ್ರತಾ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು ಎರಡೂ ಕಡೆಯವರು( ಸಶಸ್ತ್ರ ಪಡೆ ಮತ್ತು ಅರೆ ಸೇನಾಪಡೆ) ನಾಗರಿಕರನ್ನು ರಕ್ಷಿಸಲು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿನಡಿಯಲ್ಲಿ ತಮ್ಮ ಕಟ್ಟುಪಾಡುಗಳಿಗೆ ಬದ್ಧವಾಗಿರುವಂತೆ ಒತ್ತಾಯಿಸಿದೆ ಮತ್ತು ನಗರದಿಂದ ಪಲಾಯನ ಮಾಡಲು ಪ್ರಯತ್ನಿಸುವವರಿಗೆ ಸುರಕ್ಷಿತ ಮಾರ್ಗದ ಅಗತ್ಯವನ್ನು ಒತ್ತಿಹೇಳಿದೆ. ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಅನುಮತಿಸಲು ಒತ್ತಾಯಿಸಿದ್ದು ಅಸ್ಥಿರತೆ ಮತ್ತು ಘರ್ಷಣೆಯನ್ನು ಪ್ರಚೋದಿಸಲು ಪ್ರಯತ್ನಿಸುವ ಬಾಹ್ಯ ಹಸ್ತಕ್ಷೇಪದಿಂದ ದೂರವಿರಬೇಕು ಎಂದು ರಾಷ್ಟ್ರಗಳನ್ನು ಆಗ್ರಹಿಸಿದೆ.
ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಮುತ್ತಿಗೆಗೆ ಒಳಗಾಗಿದ್ದ ಅಲ್ - ಫಶರ್ ನಗರವು ಕರಾಳ ನರಕವಾಗಿ ಮಾರ್ಪಟ್ಟಿದೆ. ಅರೆ ಸೇನಾಪಡೆಯ ಸದಸ್ಯರಿಂದ ಸಾಮೂಹಿಕ ಹತ್ಯೆ, ಅತ್ಯಾಚಾರದ ಅಪರಾಧಗಳು ಹೆಚ್ಚಿವೆ. ಈ ವಾರ ನಗರದ ಸೌದಿ ಹೆರಿಗೆ ಆಸ್ಪತ್ರೆಯ ಮೇಲೆ ಅರೆ ಸೇನಾಪಡೆಯ ದಾಳಿಯಲ್ಲಿ ರೋಗಿಗಳು ಸೇರಿದಂತೆ ಸುಮಾರು 500 ಮಂದಿ ಸಾವನ್ನಪ್ಪಿರುವುದು ಈ ಯುದ್ಧದ ಸಂದರ್ಭದ ಅಮಾನವೀಯತೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ವಿಭಾಗದ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ.