ಅಲ್-ಫಾಶೆರ್‌ನಿಂದ ಹಿಂದೆ ಸರಿದ ಸುಡಾನ್ ಸೇನೆ | ಅರೆಸೈನಿಕ ಪಡೆ ಆರ್‌ಎಸ್‌ಎಫ್‌ನಿಂದ ವ್ಯಾಪಕ ಹಿಂಸಾಚಾರ : ವಿಶ್ವಸಂಸ್ಥೆ
Ibrahim Mohammed Ishak/ Reuters
ಖಾರ್ತೂಮ್, ಅ. 28: ದಾರ್ಫರ್‌ನಲ್ಲಿರುವ ತನ್ನ ಕೊನೆಯ ಭದ್ರಕೋಟೆ ಅಲ್‌ಫಾಶರ್‌ನಿಂದ ಸೈನಿಕರನ್ನು ವಾಪಸ್ ಕರೆಸುತ್ತಿರುವುದಾಗಿ ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್-ಬುರ್ಹಾನ್ ಸೋಮವಾರ ಘೋಷಿಸಿದ್ದಾರೆ. ಈ ನಡುವೆ, ಅಲ್-ಫಾಶೆರ್ ನಗರದ ನಿಯಂತ್ರಣವನ್ನು ಹೊಂದಿರುವ ಅರೆಸೈನಿಕ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಗರದಲ್ಲಿ ನಡೆಸುತ್ತಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ವಿಶ್ವಸಂಸ್ಥೆಯು ಕಟು ಎಚ್ಚರಿಕೆ ನೀಡಿದೆ.
ಅಲ್-ಫಾಶೆರ್‌ನಲ್ಲಿರುವ ಸುಡಾನ್ ಸೇನೆಯ ಪ್ರಮುಖ ನೆಲೆಯ ಮೇಲಿನ ನಿಯಂತ್ರಣವನ್ನು ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ತನ್ನ ವಶಕ್ಕೆ ತೆಗೆದುಕೊಂಡು ತನ್ನ ವಿಜಯವನ್ನು ಘೋಷಿಸಿದ ಒಂದು ದಿನದ ಬಳಿಕ ಅಬ್ದುಲ್ ಫತ್ತಾಹ್ ಅಲ್-ಬರ್ಹಾನ್ ಈ ಘೋಷಣೆ ಮಾಡಿದ್ದಾರೆ.
ಅಲ್ ಫಾಶೆರ್‌ನಿಂದ ಸೇನೆ ಹಿಂದೆಗೆದ ಬಳಿಕ, ಅಲ್ಲಿ ವಾಸಿಸುತ್ತಿರುವ 2.5 ಲಕ್ಷಕ್ಕೂ ಅಧಿಕ ಜನರು ಆರ್‌ಎಸ್‌ಎಫ್‌ನ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ. ಈಗ ಅಲ್ಲಿ ಹತ್ಯೆಗಳು, ಬಂಧನಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೆರವು ಸಂಘಟನೆಗಳು ವರದಿ ಮಾಡಿವೆ.