ಗಾಂಜಾ ಹೊಂದಿದ್ದ ಸೂಪರ್ ಮಾಡೆಲ್ ಗೀಗಿ ಹದೀದ್ ಬಂಧನ
Photo: instagram.com/gigihadid/
ಕೇಮನ್ ದ್ವೀಪ: ಅಮೆರಿಕದ ಸೂಪರ್ ಮಾಡೆಲ್ ಗೀಗಿ ಹದೀದ್ ಅವರನ್ನು ಗಾಂಜಾ ಹೊಂದಿದ್ದ ಕಾರಣಕ್ಕೆ ಕೇಮನ್ ದ್ವೀಪದಲ್ಲಿ ಬಂಧಿಸಲಾಗಿದೆ. ರಜಾಕಾಲದ ವಿರಾಮಕ್ಕಾಗಿ ಹದೀದ್ ಕೇಮನ್ ದ್ವೀಪಕ್ಕೆ ಆಗಮಿಸಿದ್ದರು.
ಸ್ನೇಹಿತನ ಜತೆ ಖಾಸಗಿ ವಿಮಾನದಲ್ಲಿ ಈ ದ್ವೀಪಕ್ಕೆ ಆಗಮಿಸಿದ ಅವರನ್ನು ಓವನ್ ರಾಬಟ್ರ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 10ರಂದು ಬಂಧಿಸಲಾಗಿದೆ ಎಂದು ಇ ನ್ಯೂಸ್ ವರದಿ ಮಾಡಿದೆ.
ಕೇಮನ್ ಮರ್ಲ್ ರೋಡ್ ಸ್ಥಳೀಯ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಇ-ನ್ಯೂಸ್ ಈ ವರದಿ ಮಾಡಿದ್ದು, ಹದೀದ್ ಖಾಸಗಿ ವಿಮಾನದಲ್ಲಿ ಆಗಮಿಸಿದ ತಕ್ಷಣ ಕಸ್ಟಮ್ಸ್ ಅಧಿಕಾರಿಗಳು, ಅವರ ಬಳಿ ಗಾಂಜಾ ಮತ್ತು ಗಾಂಜಾ ಸೇವನೆಗೆ ಬೇಕಾದ ಪರಿಕರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾಗಿ ತಿಳಿಸಿದೆ.
ಅಕ್ರಮವಾಗಿ ಗಾಂಜಾ ಹೊಂದಿದ ಮತ್ತು ಗಾಂಜಾ ಸೇವನೆಗೆ ಬೇಕಾದ ಪಾತ್ರೆಗಳನ್ನು ಹೊಂದಿದ್ದ ಆರೋಪದಲ್ಲಿ ಹದೀದ್ ಹಾಗೂ ಅವರ ಸ್ನೇಹಿತನನ್ನು ಬಂಧಿಸಲಾಗಿದೆ. ಅವರನ್ನು ಕೈದಿಗಳ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ಗೀಗಿ ಹದೀದ್ ಮತ್ತು ಆಕೆಯ ಸ್ನೇಹಿತ ಮೆಕ್ಕ್ರಾತಿ ಅವರು ಜುಲೈ 12ರಂದು ಕೋರ್ಟ್ ಮುಂದೆ ಹಾಜರಾಗಿದ್ದು, ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಅವರು ತಪ್ಪು ಒಪ್ಪಿಕೊಂಡಿದ್ದು, ಪ್ರತಿಯೊಬ್ಬರಿಗೂ 1000 ಡಾಲರ್ ದಂಡ ವಿಧಿಸಲಾಗಿದೆ. ಆದರೆ ಶಿಕ್ಷೆಯನ್ನು ದಾಖಲಿಸಿಲ್ಲ ಎಂದು ಹೇಳಲಾಗಿದೆ.