ರಶ್ಯ ಭೇಟಿಯ ವೇಳೆ ಮಾಜಿ ಆಡಳಿತಗಾರ ಬಷರ್ ಅಸಾದ್ ರನ್ನು ಹಸ್ತಾಂತರಿಸಿ: ಸಿರಿಯಾ ಆಗ್ರಹ
Photo Credit : AFP
ಡಮಾಸ್ಕಸ್: ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಬುಧವಾರ ಇದೇ ಮೊದಲ ಬಾರಿಗೆ ಮಾಸ್ಕೊಗೆ ಭೇಟಿ ನೀಡುತ್ತಿದ್ದು, ಈ ಭೇಟಿಯ ವೇಳೆ ಸಿರಿಯಾದ ಮಾಜಿ ಅಧ್ಯಕ್ಷ ಬಷರ್ ಅಸಾದ್ ರನ್ನು ಸಿರಿಯಾಗೆ ಹಸ್ತಾಂತರಿಸಿ ಎಂದು ರಶ್ಯಗೆ ಮನವಿ ಮಾಡಲಾಗಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಶರಾ ಅವರು ತಮ್ಮ ರಶ್ಯ ಭೇಟಿಯ ವೇಳೆ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಪದಚ್ಯುತಗೊಂಡು, ರಶ್ಯದಲ್ಲಿ ಆಶ್ರಯ ಪಡೆದಿರುವ ಸಿರಿಯಾದ ದೀರ್ಘಕಾಲದ ಆಡಳಿತಗಾರ ಬಷರ್ ಅಸಾದ್ ಸೇರಿದಂತೆ, ಯುದ್ಧಾಪರಾಧಗಳನ್ನು ಎಸಗಿರುವ ಎಲ್ಲ ವ್ಯಕ್ತಿಗಳನ್ನೂ ಹಸ್ತಾಂತರಿಸುವಂತೆ ರಶ್ಯದ ಅಧ್ಯಕ್ಷರನ್ನು ಕೋರಲಿದ್ದಾರೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಶರಾ ಅವರು ರಶ್ಯ ಮತ್ತು ಸಿರಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಾಮಾನ್ಯ ಹಿತಾಸಕ್ತಿ ಹೊಂದಿರುವ ಪ್ರಾಂತೀಯ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಂದಿಗೆ ಮಾತುಕತೆ ನಡೆಸಲು ಅಧಿಕೃತ ಭೇಟಿಯ ಭಾಗವಾಗಿ ಬುಧವಾರ ಮಾಸ್ಕೊಗೆ ಆಗಮಿಸಿದರು” ಎಂದು ಸಿರಿಯಾದ ಸರಕಾರಿ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ.
ಬುಧವಾರ ಸಂಜೆ ಮಾಸ್ಕೊದಲ್ಲಿ ಶರಾರೊಂದಿಗೆ ನಡೆಯಲಿರುವ ಮಾತುಕತೆಯ ವೇಳೆ ಸಿರಿಯಾದಲ್ಲಿನ ರಶ್ಯ ಸೇನಾ ನೆಲೆಗಳ ಭವಿಷ್ಯದ ಕುರಿತು ವ್ಲಾದಿಮಿರ್ ಪುಟಿನ್ ಚರ್ಚೆ ನಡೆಸಲಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.
ಲಟಾಕಿಯಾ ಪ್ರಾಂತ್ಯದಲ್ಲಿನ ಹ್ಮೈಮಿಮ್ ವಾಯುನೆಲೆ ಹಾಗೂ ಕರಾವಳಿಯಲ್ಲಿರುವ ಟಾರ್ಟಸ್ ನೌಕಾ ನೆಲೆ ಸೇರಿದಂತೆ ಸಿರಿಯಾದಲ್ಲಿ ರಶ್ಯ ಎರಡು ಪ್ರಮುಖ ಸೇನಾ ನೆಲೆಗಳನ್ನು ಹೊಂದಿದೆ.