ಚೀನಾದ `ಒಂದು ದೇಶ, ಎರಡು ವ್ಯವಸ್ಥೆ' ತೈವಾನ್ ಗೆ ಬೇಡ: ಅಧ್ಯಕ್ಷ ಲಾಯ್ ಚಿಂಗ್‍ಟೆ
ಲಾಯ್ ಚಿಂಗ್ ಟೆ | Photo Credit : ddnews.gov.in
ತೈಪೆ, ಅ.31: ಚೀನಾದ `ಒಂದು ದೇಶ, ಎರಡು ವ್ಯವಸ್ಥೆಗಳು' ತೈವಾನ್ ಗೆ ಬೇಕಾಗಿಲ್ಲ. ಅದು ತನ್ನ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ದೃಢಸಂಕಲ್ಪ ಮಾಡಬೇಕು ಎಂದು ತೈವಾನ್ ಅಧ್ಯಕ್ಷ ಲಾಯ್ ಚಿಂಗ್ ಟೆ ಶುಕ್ರವಾರ ಹೇಳಿದ್ದು ದ್ವೀಪವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುವ ಚೀನಾದ ಇತ್ತೀಚಿನ ಪ್ರಯತ್ನವನ್ನು ತಿರಸ್ಕರಿದ್ದಾರೆ.
ತೈವಾನ್ ಮೇಲೆ ಬಲಪ್ರಯೋಗಿಸುವುದನ್ನು ಖಂಡಿತವಾಗಿಯೂ ತಳ್ಳಿಹಾಕುವುದಿಲ್ಲ ಎಂದು ಚೀನಾ ಈ ವಾರ ಹೇಳುವ ಮೂಲಕ ತೈವಾನ್ ಕುರಿತ ತನ್ನ ನಿಲುವು ಇನ್ನಷ್ಟು ಕಠಿಣಗೊಂಡಿರುವುದನ್ನು ಸೂಚಿಸಿತ್ತು. ಉತ್ತರ ತೈವಾನ್ ನ ಹುಕೋವ್ ಸೇನಾ ನೆಲೆಗೆ ಭೇಟಿ ನೀಡಿದ ಲಾಯ್, ಯೋಧರನ್ನು ಉದ್ದೇಶಿಸಿ ಮಾತನಾಡುತ್ತಾ ` ಆಕ್ರಮಣಕಾರರ ಪ್ರತಿಪಾದನೆಯನ್ನು ಒಪ್ಪಿಕೊಂಡು ಸಾರ್ವಭೌಮತ್ವವನ್ನು ಬಿಟ್ಟುಕೊಡುವುದರಿಂದ ಶಾಂತಿ ಸಾಧ್ಯವಾಗದು. ಶಕ್ತಿ ಮಾತ್ರ ನಿಜವಾದ ಶಾಂತಿಯನ್ನು ತರಬಲ್ಲದು. ಆದ್ದರಿಂದ ಘನತೆ ಮತ್ತು ದೃಢಸಂಕಲ್ಪದಿಂದ ಸ್ವಾಧೀನತೆ, ಆಕ್ರಮಣಶೀಲತೆ ಮತ್ತು ಬಲವಂತದ ಏಕೀಕರಣವನ್ನು ವಿರೋಧಿಸಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ನಾವು ಒಂದು ದೇಶ ಎರಡು ವ್ಯವಸ್ಥೆಯನ್ನು ತಿರಸ್ಕರಿಸುತ್ತೇವೆ. ಯಾಕೆಂದರೆ ನಾವು ನಮ್ಮ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಸಾಂವಿಧಾನಿಕ ವ್ಯವಸ್ಥೆಯನ್ನು ಸದಾ ಎತ್ತಿಹಿಡಿಯುತ್ತೇವೆ ತೈವಾನ್ ನ ಸಾರ್ವಭೌಮತೆಯನ್ನು ಉಲ್ಲಂಘಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ತೈವಾನ್ ನ ಯಾವುದೇ ಪ್ರಮುಖ ರಾಜಕೀಯ ಪಕ್ಷವೂ ಚೀನಾದ ನಿಲುವನ್ನು ಒಪ್ಪಿಕೊಂಡಿಲ್ಲ' ಎಂದು ಲಾಯ್ ಚಿಂಗ್ ಟೆ ಹೇಳಿದ್ದಾರೆ. ಇದೇ ಸಂದರ್ಭ ಅವರು ಅಮೆರಿಕದ ಸಂಸ್ಥೆಯ ಸಹಘಟಕ ನಿರ್ಮಿಸಿರುವ ಎಂಐಎ2ಟಿ ಅಬ್ರಾಮ್ಸ್ ಟ್ಯಾಂಕ್ ಗಳನ್ನು ಸೇನಾ ನೆಲೆಗೆ ಅಧಿಕೃತವಾಗಿ ನಿಯೋಜಿಸಿರುವುದಾಗಿ ವರದಿಯಾಗಿದೆ.