×
Ad

ಭಾರತದ ಕಾರ್ಮಿಕರ ವಿರುದ್ಧ `ಜನಾಂಗೀಯ' ಅಪಹಾಸ್ಯ : ಕ್ಷಮೆ ಯಾಚಿಸಿದ ತೈವಾನ್ ಸಚಿವೆ

Update: 2024-03-07 21:15 IST

Photo : NDTV

ತೈಪೆ : ಭಾರತದ ಈಶಾನ್ಯ ಪ್ರದೇಶದಿಂದ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ತನ್ನ ಸರಕಾರದ ಯೋಜನೆಗಳ ಬಗ್ಗೆ ನೀಡಿದ ಅನುಚಿತವಾಗಿ ಹೇಳಿಕೆಗಾಗಿ ತೈವಾನ್‍ನ ಕಾರ್ಮಿಕ ಸಚಿವೆ ಹ್ಸು ಮಿಂಗ್‍ಚುನ್ ಕ್ಷಮೆ ಯಾಚಿಸಿದ್ದಾರೆ.

ಫೆಬ್ರವರಿ 16ರಂದು ಸಹಿ ಹಾಕಿದ ಒಪ್ಪಂದದಂತೆ ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ತೈವಾನ್ ಯೋಜಿಸಿದೆ. ಇದು ಎರಡೂ ದೇಶಗಳ ನಡುವೆ ಜನರಿಂದ ಜನರ ನಡುವಿನ ಸಂಪರ್ಕಕ್ಕೆ ಉತ್ತೇಜನ ನೀಡುವ ಜತೆಗೆ ತೈವಾನ್‍ನ ಉದ್ದಿಮೆಗಳು ಎದುರಿಸುತ್ತಿರುವ ಕಾರ್ಮಿಕರ ಕೊರತೆ ಸಮಸ್ಯೆಗೂ ಪರಿಹಾರವಾಗಲಿದೆ ಎಂದು ತೈವಾನ್‍ನ ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಹೇಳಿಕೆ ನೀಡಿತ್ತು.

ಈ ಬಗ್ಗೆ ಸುದ್ಧಿಗಾರರ ಜತೆ ಮಾತನಾಡಿದ ತೈವಾನ್‍ನ ಕಾರ್ಮಿಕ ಸಚಿವೆ ಹ್ಸು ` ಈಶಾನ್ಯ ಭಾರತದ ಕಾರ್ಮಿಕರ ಚರ್ಮದ ಬಣ್ಣ ಮತ್ತು ಆಹಾರ ಪದ್ಧತಿ ನಮಗೆ ಹತ್ತಿರವಾಗಿರುವುದರಿಂದ ಮೊದಲಿಗೆ ನೇಮಿಸಿಕೊಳ್ಳಲಾಗುವುದು'. ಈಶಾನ್ಯ ಪ್ರದೇಶದ ಭಾರತೀಯರು `ಹೆಚ್ಚಾಗಿ ಕ್ರಿಶ್ಚಿಯನ್ನರು' ಉತ್ಪಾದನೆ, ನಿರ್ಮಾಣ ಮತ್ತು ಕೃಷಿ ಕ್ಷೇತ್ರದಲ್ಲಿ ಪ್ರವೀಣರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆ ವಿದೇಶಾಂಗ ಇಲಾಖೆಯ ಮೌಲ್ಯಮಾಪನಗಳನ್ನು ಆಧರಿಸಿದೆ' ಎಂದಿದ್ದರು.

ಈ ಹೇಳಿಕೆ ಆಡಳಿತಾರೂಢ ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಕ್ಷದ ಸಂಸದ ಚೆನ್ ಕುವಾನ್‍ತಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಲಸಿಗ ಕಾರ್ಮಿಕರ ನೇಮಕಾತಿಗೆ ಚರ್ಮದ ಬಣ್ಣ ಮತ್ತು ಜನಾಂಗ ಆಧಾರವಾಗಬಾರದು' ಎಂದು ಖಂಡಿಸಿದ್ದರು.

ಮಂಗಳವಾರ ನಡೆದ ಸಂಸದೀಯ ಸಭೆಯಲ್ಲಿ ತನ್ನ ಹೇಳಿಕೆಯ ಬಗ್ಗೆ ಹ್ಸು ಕ್ಷಮೆ ಯಾಚಿಸಿದರು. `ತನ್ನ ಅನುಚಿತ ಹೇಳಿಕೆಯು ದೇಶದ ಕಾರ್ಮಿಕ ನೀತಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿದೆ. ಭಾರತದ ಎಲ್ಲಾ ಕಾರ್ಮಿಕರ ಬಗ್ಗೆಯೂ ತನಗೆ ಗೌರವವಿದೆ' ಎಂದಿದ್ದಾರೆ. ತೈವಾನ್ ವಿಭಿನ್ನ ದೃಷ್ಟಿಕೋನಗಳನ್ನು ಸಮಾನವಾಗಿ ಸ್ವೀಕರಿಸುವ ನಾಗರಿಕ ಸಮಾಜವನ್ನು ಹೊಂದಿದೆ. ಭಾರತದ ವೈವಿಧ್ಯಮಯ ಮತ್ತು ಶ್ರೀಮಂತ ಸಂಸ್ಕೃತಿಯನ್ನು, ಉಭಯ ದೇಶಗಳ ಜನರ ನಡುವಿನ ಸ್ನೇಹವನ್ನು ನಾವು ಗೌರವಿಸುತ್ತೇವೆ ಮತ್ತು ಸಚಿವೆಯ ಅನುಚಿತ ಹೇಳಿಕೆಯ ಬಗ್ಗೆ ಕ್ಷಮೆ ಯಾಚಿಸುವುದಾಗಿ ತೈವಾನ್‍ನ ವಿದೇಶಾಂಗ ಇಲಾಖೆಯೂ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News