ತಾಲಿಬಾನ್ ಆಡಳಿತವನ್ನು ಸಂಪೂರ್ಣ ಅಳಿಸಿ ಹಾಕುತ್ತೇವೆ: ಪಾಕಿಸ್ತಾನದ ಎಚ್ಚರಿಕೆ
ಶಾಂತಿ ಮಾತುಕತೆ ವಿಫಲ
ಖ್ವಾಜಾ ಆಸಿಫ್ | Photo Credit : ddnews.gov.in
ಇಸ್ಲಮಾಬಾದ್, ಅ.29: ಪ್ರಚೋದಿಸುವ ಕಾರ್ಯ ಮಾಡಿದರೆ ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಅನ್ನು ತನ್ನ ದೇಶ ಸಂಪೂರ್ಣವಾಗಿ ಅಳಿಸಿ ಹಾಕಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬುಧವಾರ ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನ್ ಆಡಳಿತವನ್ನು ಸಂಪೂರ್ಣವಾಗಿ ಅಳಿಸಿ ಹಾಕಲು ಮತ್ತು ಅವರನ್ನು ಅಡಗಿಕೊಳ್ಳಲು ಗುಹೆಗಳಿಗೆ ಹಿಂದಕ್ಕೆ ತಳ್ಳುವ ಕಾರ್ಯಕ್ಕೆ ಪಾಕಿಸ್ತಾನ ತನ್ನ ಸಂಪೂರ್ಣ ಶಸ್ತ್ರಾಗಾರದ 1 ಶೇಕಡಾ ಅಂಶವನ್ನೂ ಬಳಸಿಕೊಳ್ಳುವ ಅಗತ್ಯವಿಲ್ಲ' ಎಂದು ಆಸಿಫ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ನಡುವೆ ಶಾಶ್ವತ ಕದನ ವಿರಾಮ ಸ್ಥಾಪನೆಗೆ ಟರ್ಕಿ ಹಾಗೂ ಖತರ್ ಮಧ್ಯಸ್ಥಿಕೆಯಲ್ಲಿ ಇಸ್ತಾಂಬುಲ್ನಲ್ಲಿ ನಡೆದ ಶಾಂತಿ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಪಾಕಿಸ್ತಾನದ ರಕ್ಷಣಾ ಸಚಿವರ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಮಾತುಕತೆ ವಿಫಲಗೊಂಡಿರುವುದನ್ನು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಬುಧವಾರ ದೃಢಪಡಿಸಿದ್ದು ` ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನದ ನಿಯೋಗ ಪ್ರಮುಖ ವಿಷಯಗಳನ್ನು ತಪ್ಪಿಸುವ ಕಾರ್ಯ ಮತ್ತು ದೂಷಣೆಯ ಆಟಕ್ಕೆ ಅಂಟಿಕೊಂಡಿತ್ತು ಮತ್ತು ಪದೇ ಪದೇ ಮಾತುಕತೆಯ ಪಥ ಬದಲಿಸಿರುವುದು ಇದಕ್ಕೆ ಕಾರಣ. ಪಾಕಿಸ್ತಾನವು ಶಾಂತಿಯ ಉದ್ದೇಶದಿಂದ ಮಾತುಕತೆಯಲ್ಲಿ ಪಾಲ್ಗೊಂಡಿದ್ದರೆ ಅಫ್ಘಾನಿಸ್ತಾನವು ಪಾಕ್ ವಿರೋಧಿ ಭಯೋತ್ಪಾದಕರಿಗೆ ತನ್ನ ನಿರಂತರ ಬೆಂಬಲವನ್ನು ಮುಂದುವರಿಸುವುದಕ್ಕೆ ಆದ್ಯತೆ ನೀಡಿದೆ' ಎಂದವರು ಆರೋಪಿಸಿದ್ದಾರೆ.