ಅಮೆರಿಕ | ಮೆಟ್ ಮ್ಯೂಸಿಯಂನಲ್ಲಿ ಅಮೂಲ್ಯ ಕಲಾಕೃತಿಗೆ ನೀರು ಸುರಿದ ಯುವಕನ ಬಂಧನ
ಸಾಂದರ್ಭಿಕ ಚಿತ್ರ (credit: ndtv.com)
ನ್ಯೂಯಾರ್ಕ್: ನ್ಯೂಯಾರ್ಕ್‌ನ ಪ್ರಸಿದ್ಧ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (Met Museum)ನಲ್ಲಿ ಅಮೂಲ್ಯ ಕಲಾಕೃತಿಗಳ ಮೇಲೆ ನೀರು ಸುರಿದು ಹಾನಿ ಉಂಟುಮಾಡಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು 19 ವರ್ಷದ ಜೋಶುವಾ ವಾವ್ರಿನ್ ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ಘಟನೆ ಸೋಮವಾರ ಸಂಜೆ 4.40ರ ವೇಳೆಗೆ (ಸ್ಥಳೀಯ ಸಮಯ) ಅಪ್ಪರ್ ಈಸ್ಟ್ ಸೈಡ್‌ನಲ್ಲಿರುವ ಮೆಟ್ ಮ್ಯೂಸಿಯಂ ಒಳಗೆ ನಡೆದಿದೆ.
ವಾವ್ರಿನ್ ಹಾನಿಗೊಳಿಸಿದ ಕಲಾಕೃತಿಗಳಲ್ಲಿ ಫ್ರೆಂಚ್ ಕಲಾವಿದ ಜೀನ್ ಆಗಸ್ಟೆ ಡೊಮಿನಿಕ್ ಇಂಗ್ರೆಸ್ ಅವರ 19ನೇ ಶತಮಾನದ ಪ್ರಸಿದ್ಧ ತೈಲ ಚಿತ್ರ ‘ಪ್ರಿನ್ಸೆಸ್ ಡಿ ಬ್ರೋಗ್ಲಿ’ ಮತ್ತು ಇಟಾಲಿಯನ್ ಕಲಾವಿದ ಗಿರೊಲಾಮೊ ಡೈ ಲಿಬ್ರಿ ಅವರ 16ನೇ ಶತಮಾನದ ಬಲಿಪೀಠ ಚಿತ್ರ ‘ಮಡೋನಾ ಅಂಡ್ ಚೈಲ್ಡ್ ವಿತ್ ಸೇಂಟ್ಸ್’ ಸೇರಿವೆ.
ವಾವ್ರಿನ್ ಘಟನೆ ಸಮಯದಲ್ಲಿ ಅಸಹಜ ವರ್ತನೆ ತೋರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ.
ಪೊಲೀಸರು ವಾವ್ರಿನ್ ವಿರುದ್ಧ ಕ್ರಿಮಿನಲ್ ದುಷ್ಕೃತ್ಯ ಆರೋಪ ದಾಖಲಿಸಿದ್ದು, ಕಲಾಕೃತಿಗಳಿಗೆ ಸುಮಾರು 3.35 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ ವಸ್ತುಸಂಗ್ರಹಾಲಯದ ಆಡಳಿತ ಮಂಡಳಿ ಈ ಬಗ್ಗೆ ಅಧಿಕೃತ ದೃಢೀಕರಣ ನೀಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಮೆಟ್ ಮ್ಯೂಸಿಯಂ ವಕ್ತಾರರು, “ಸೋಮವಾರ ಮಧ್ಯಾಹ್ನ ಅಸಹಜ ವರ್ತನೆ ತೋರಿದ ಸಂದರ್ಶಕನನ್ನು ವಸ್ತುಸಂಗ್ರಹಾಲಯದಿಂದ ಹೊರಗೆ ಕರೆದೊಯ್ಯಲಾಯಿತು. ಯಾವುದೇ ವ್ಯಕ್ತಿಗಳು ಅಥವಾ ಕಲಾಕೃತಿಗಳಿಗೆ ಗಂಭೀರ ಹಾನಿಯಾಗಿಲ್ಲ. ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಂಡ ನಮ್ಮ ಭದ್ರತಾ ಸಿಬ್ಬಂದಿ ಹಾಗೂ NYPDಗೆ ನಾವು ಕೃತಜ್ಞರಾಗಿದ್ದೇವೆ,” ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಅಕ್ಟೋಬರ್‌ನಲ್ಲಿ ಸ್ಪೇನ್ ಪೊಲೀಸರು ಪಾಬ್ಲೊ ಪಿಕಾಸೊ ಅವರ ಸುಮಾರು 5.9 ಕೋಟಿ ರೂಪಾಯಿ ಮೌಲ್ಯದ ‘ಸ್ಟಿಲ್ ಲೈಫ್ ವಿತ್ ಗಿಟಾರ್’ ಚಿತ್ರಕಲೆಯನ್ನು ವಶಪಡಿಸಿಕೊಂಡಿದ್ದರು.