ಪಾಕ್-ಅಫ್ಘಾನ್ ಗಡಿಯಲ್ಲಿ ಉದ್ವಿಗ್ನ : ತಾಲಿಬಾನ್‌ನಿಂದ ಪಾಕಿಸ್ತಾನದ 15 ಸೈನಿಕರ ಹತ್ಯೆ ; ವರದಿ
ಇಸ್ಲಮಾಬಾದ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, 15 ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಪೋಸ್ಟ್ ಮೇಲೆ ತಾಲಿಬಾನ್ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಕಾಬೂಲ್ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ ಎಂದು ದೂಷಿಸಿದ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ, ನೆರೆ ದೇಶವು ನಮ್ಮ ದೇಶದ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿತ್ತು.
“ಕಾಬೂಲ್ ಮೇಲೆ ಪಾಕಿಸ್ತಾನ ಸೇನೆ ನಡೆಸಿದ ವಾಯು ದಾಳಿಗೆ ಪ್ರತೀಕಾರವಾಗಿ ತಾಲಿಬಾನ್ ಪಡೆಗಳು ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರ ಇನಾಯತ್ ಖೌರಾಝ್ಮ್ ಈ ಕುರಿತು ಪ್ರತಿಕ್ರಿಯಿಸಿ, ಕಾರ್ಯಾಚರಣೆಯು ಮಧ್ಯರಾತ್ರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಒಂದು ವೇಳೆ ವಿರೋಧಿ ಪಡೆಯು ಮತ್ತೆ ಅಫ್ಘಾನಿಸ್ತಾನದ ಗಡಿಯನ್ನು ಉಲ್ಲಂಘಿಸಿದರೆ, ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಲು ನಮ್ಮ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಹಾಗೂ ದೃಢವಾಗಿ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.