ವೇದಿಕೆಗೆ ಫೆಲೆಸ್ತೀನ್ ನಾಗರಿಕನನ್ನು ಆಹ್ವಾನಿಸಿದ್ದಕ್ಕೆ ಗ್ರೇಟಾ ಥನ್ ಬರ್ಗ್ ರಿಂದ ಮೈಕ್ ಕಿತ್ತುಕೊಂಡ ವ್ಯಕ್ತಿ!
Photo : x/@ArthurM40330824 video grab
ಆಮ್ ಸ್ಟ್ರರ್ ಡ್ಯಾಮ್: ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಫೆಲೆಸ್ತೀನ್ ಪರ ಸಂದೇಶ ನೀಡಿದ್ದಕ್ಕೆ ಸ್ವೀಡನ್ ನ ಹವಾಮಾನ ಹೋರಾಟಗಾರ್ತಿ ಗ್ರೇತಾ ಥನ್ ಬರ್ಗ್ ರಿಂದ ಮೈಕ್ರೊಫೋನ್ ಕಿತ್ತುಕೊಂಡಿರುವ ಘಟನೆ ನೆದರ್ ಲ್ಯಾಂಡ್ಸ್ ನ ರಾಜಧಾನಿಯಲ್ಲಿ ನಡೆದಿದೆ. ಗ್ರೇತಾ ಥನ್ ಬರ್ಗ್ ಮಾತನಾಡಲು ಓರ್ವ ಫೆಲೆಸ್ತೀನಿಯನ್ ಹಾಗೂ ಓರ್ವ ಅಫ್ಘನ್ ಮಹಿಳೆಯನ್ನು ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ವೇದಿಕೆ ಮೇಲೆ ನುಗ್ಗಿದ ವ್ಯಕ್ತಿಯೊಬ್ಬ, ಕಾರ್ಯಕ್ರಮಕ್ಕೆ ಅಡಚಣೆಯುಂಟು ಮಾಡಿದ ಎಂದು indiatoday.in ವರದಿ ಮಾಡಿದೆ.
ಈ ಪಾದಯಾತ್ರೆಯನ್ನು ಥನ್ ಬರ್ಗ್ ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾನೆ. “ನೀವಿಲ್ಲಿ ಹವಾಮಾನ ಪ್ರದರ್ಶನಕ್ಕಾಗಿ ಬಂದಿದ್ದೀರೇ ಹೊರತು ರಾಜಕೀಯ ನಿಲುವನ್ನು ಪ್ರದರ್ಶಿಸಲಲ್ಲ” ಎಂದು ಥನ್ ಬರ್ಗ್ ಅವರನ್ನು ಸಮೀಪಿಸಿದ ಆ ವ್ಯಕ್ತಿ ಆಕ್ಷೇಪಿಸಿದ್ದಾನೆ. ನಂತರ ಆಕೆಯ ಮೈಕ್ರೊಫೋನ್ ಕಿತ್ತು ನೆಲಕ್ಕೆ ಬಿಸಾಡಿದ ಆ ವ್ಯಕ್ತಿ, ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾನೆ.
ಇದಕ್ಕೂ ಮುನ್ನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗ್ರೇತಾ ಥನ್ ಬರ್ಗ್, “ಒಂದು ಹವಾಮಾನ ಹೋರಾಟವಾಗಿ ನಾವು ದಬ್ಬಾಳಿಕೆಗೆ ಈಡಾಗಿರುವವರು ಹಾಗೂ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವವರ ಕೂಗನ್ನು ಆಲಿಸಬೇಕಿದೆ. ಇಲ್ಲವಾದರೆ, ಅಂತಾರಾಷ್ಟ್ರೀಯ ಒಗ್ಗಟ್ಟಿಲ್ಲದೆ ಹವಾಮಾನ ನ್ಯಾಯ ದೊರೆಯಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದರು.
ಈ ಸಂದರ್ಭದಲ್ಲಿ ಅವರು ಫೆಲೆಸ್ತೀನಿಯನ್ನರ ಸಾಂಪ್ರದಾಯಿಕ ತಲೆವಸ್ತ್ರವಾದ ಕೆಫಿಯೆ ಅನ್ನು ಧರಿಸಿದ್ದರು.
ಇದೇ ಸಮಾವೇಶದಲ್ಲಿ ಮತ್ತೊಬ್ಬ ಹೋರಾಟಗಾರ್ತಿಯು, “ನದಿಯಿಂದ ಸಾಗರದವರೆಗೆ ಫೆಲೆಸ್ತೀನ್ ಮುಕ್ತವಾಗಲಿದೆ” ಎಂದು ಹೇಳಿದಾಗಲೂ ಆಕೆಯ ಭಾಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.