×
Ad

ಸುಡಾನ್ ಯುದ್ಧ ಗಡಿ ಮೀರಿ ಹರಡಬಹುದು: ವಿಶ್ವಸಂಸ್ಥೆಗೆ ಸುಡಾನ್ ಸೇನಾಮುಖ್ಯಸ್ಥ ಎಚ್ಚರಿಕೆ

Update: 2023-09-22 23:40 IST

Photo: ANI

ವಿಶ್ವಸಂಸ್ಥೆ, ಸೆ.22: ಸುಡಾನ್‌ನಲ್ಲಿನ ಯುದ್ಧವನ್ನು ಈಗಲೇ ತಡೆಯದಿದ್ದರೆ ಅದು ಈಶಾನ್ಯ ಆಫ್ರಿಕಾ ದೇಶದ ಗಡಿಯನ್ನು ಮೀರಿ ಹರಡಬಹುದು ಎಂದು ಸುಡಾನ್ ಸೇನಾ ಮುಖ್ಯಸ್ಥರು ವಿಶ್ವಸಂಸ್ಥೆಯನ್ನು ಎಚ್ಚರಿಸಿದ್ದು, ಪ್ರತಿಸ್ಪರ್ಧಿ ಅರೆಸೇನಾಪಡೆಯನ್ನು ಭಯೋತ್ಪಾದಕ ಗುಂಪು ಎಂದು ಗುರುತಿಸುವಂತೆ ಜಾಗತಿಕ ಮುಖಂಡರನ್ನು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 78ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಡಾನ್ ಸೇನಾಮುಖ್ಯಸ್ಥ, ಸುಡಾನ್‌ನ ಪರಿವರ್ತನಾ ಸಾರ್ವಭೌಮತ್ವ ಮಂಡಳಿಯ ಅಧ್ಯಕ್ಷ ಅಬ್ದುಲ್ ಫತ್ತಾಹ್ ಬುರ್ಹಾನ್ ‘ಈ ಯುದ್ಧವು ಈಗ ಪ್ರಾದೇಶಿಕ ಮತ್ತು ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದೆ. ಇದು ಯುದ್ಧದ ಕಿಡಿಯಂತೆ ಈ ವಲಯದ ಇತರ ದೇಶಗಳಿಗೂ ಹರಡಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್‌ನಲ್ಲಿ ಸುಡಾನ್‌ನಲ್ಲಿ ಬಿಕ್ಕಟ್ಟು ತಲೆದೋರಿದ್ದು ಜನರಲ್ ಬುರ್ಹಾನ್ ನೇತೃತ್ವದ ಸೇನೆ ಹಾಗೂ ಮುಹಮ್ಮದ್ ಹಮ್ದಾನ್ ಡಗಾಲೊ ನೇತೃತ್ವದ ಅರೆಸೇನಾ ಪಡೆ (ಆರ್‌ಎಸ್‌ಎಫ್)ಯ ನಡುವೆ ದೀರ್ಘಾವಧಿಯಿಂದ ಹೊಗೆಯಾಡುತ್ತಿದ್ದ ಭಿನ್ನಾಭಿಪ್ರಾಯ ಉಲ್ಬಣಿಸಿತ್ತು. ಅಧಿಕಾರದ ಮೇಲೆ ನಿಯಂತ್ರಣ ಸಾಧಿಸಲು ಎರಡೂ ಪಡೆಗಳ ನಡುವೆ ಆರಂಭವಾದ ಹೋರಾಟದಲ್ಲಿ ಇದುವರೆಗೆ ಕನಿಷ್ಠ 5,000 ಮಂದಿ ಹತರಾಗಿದ್ದು ಇತರ 12,000 ಮಂದಿ ಗಾಯಗೊಂಡಿರುವುದಾಗಿ ಸುಡಾನ್‌ಗೆ ವಿಶ್ವಸಂಸ್ಥೆಯ ಪ್ರತಿನಿಧಿ ವೋಕರ್ ಪರ್ಥೆಸ್ ವರದಿ ಮಾಡಿದ್ದಾರೆ.

ಈ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸುಡಾನ್‌ನ ಸೇನೆ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ ಎಂದ ಬುರ್ಹಾನ್, ಆರ್‌ಎಸ್‌ಎಫ್ ಅನ್ನು ಭಯೋತ್ಪಾದಕ ಗುಂಪಿನ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿದರು. ಇತರ ದೇಶಗಳ ಭಯೋತ್ಪಾದಕ ಸಂಘಟನೆ ಹಾಗೂ ಕಾನೂನುಬಾಹಿರ ತಂಡಗಳ ನೆರವು ಪಡೆಯುತ್ತಿರುವ ಆರ್‌ಎಸ್‌ಎಫ್ ಈ ಪಟ್ಟಿಗೆ ಅರ್ಹವಾಗಿದೆ. ಹತ್ಯೆ, ಬೆಂಕಿ ಇಡುವುದು, ಅತ್ಯಾಚಾರ, ಬಲವಂತದ ಸ್ಥಳಾಂತರ, ಲೂಟಿ, ಚಿತ್ರಹಿಂಸೆ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ, ಬಾಡಿಗೆ ಸಿಪಾಯಿಗಳು ಅಥವಾ ಮಕ್ಕಳನ್ನು ಯುದ್ಧಕ್ಕೆ ನೇಮಿಸಿಕೊಳ್ಳುವುದು ಇತ್ಯಾದಿ ಅಪರಾಧಗಳಿಗೆ ಹೊಣೆಗಾರಿಕೆ ಮತ್ತು ಶಿಕ್ಷೆಯ ಅಗತ್ಯವಿದೆ ಎಂದವರು ಪ್ರತಿಪಾದಿಸಿದ್ದಾರೆ.

ಶಾಂತಿಯುತ ಚುನಾವಣೆಯ ಮೂಲಕ ಸುಡಾನ್ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಳ್ಳಬೇಕಿದ್ದರೆ ಸಂಘರ್ಷವನ್ನು ಪರಿಹರಿಸಬೇಕಾಗಿದೆ. ಸುಡಾನ್ ಜನರಿಗೆ ರಾಷ್ಟ್ರೀಯ ಒಮ್ಮತಾಭಿಪ್ರಾಯದ ಮೂಲಕ ಅಧಿಕಾರ ಹಸ್ತಾಂತರಿಸುವ ನಮ್ಮ ಈ ಹಿಂದಿನ ವಾಗ್ದಾನಕ್ಕೆ ಈಗಲೂ ಬದ್ಧವಿದ್ದೇವೆ ಮತ್ತು ಅಧಿಕಾರ ಹಸ್ತಾಂತರದ ಬಳಿಕ ಸುಡಾನ್ ಸೇನೆ ರಾಜಕೀಯ ದಿಂದ ಶಾಶ್ವತವಾಗಿ ದೂರ ಉಳಿಯಲಿದೆ’ ಎಂದು ಬುರ್ಹಾನ್ ಘೋಷಿಸಿದ್ದಾರೆ.

ಶಾಂತಿಯುತ ಚುನಾವಣೆಯ ಮೂಲಕ ಸುಡಾನ್ ಪ್ರಜಾಪ್ರಭುತ್ವಕ್ಕೆ ಪರಿವರ್ತನೆಗೊಳ್ಳಬೇಕಿದ್ದರೆ ಸಂಘರ್ಷವನ್ನು ಪರಿಹರಿಸಬೇಕಾಗಿದೆ. ಸುಡಾನ್ ಜನರಿಗೆ ರಾಷ್ಟ್ರೀಯ ಒಮ್ಮತಾಭಿಪ್ರಾಯದ ಮೂಲಕ ಅಧಿಕಾರ ಹಸ್ತಾಂತರಿಸುವ ನಮ್ಮ ಈ ಹಿಂದಿನ ವಾಗ್ದಾನಕ್ಕೆ ಈಗಲೂ ಬದ್ಧವಿದ್ದೇವೆ ಮತ್ತು ಅಧಿಕಾರ ಹಸ್ತಾಂತರದ ಬಳಿಕ ಸುಡಾನ್ ಸೇನೆ ರಾಜಕೀಯ ದಿಂದ ಶಾಶ್ವತವಾಗಿ ದೂರ ಉಳಿಯಲಿದೆ’ ಎಂದು ಬುರ್ಹಾನ್ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News