ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಪರಿಹಾರ ದೊರಕದೆ ಜಗತ್ತಿನಲ್ಲಿ ಶಾಂತಿ ನೆಲೆಸದು: ವಿಶ್ವಸಂಸ್ಥೆಯ ನಿರಾಶ್ರಿತರ ಘಟಕದ ಹೈಕಮಿಷನರ್
ಫಿಲಿಪ್ಪೋ ಗ್ರಾಂಡಿ (Photo credit: UN Photo/Loey Felipe)
ನ್ಯೂಯಾರ್ಕ್: “ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ನ್ಯಾಯಯುತ ಪರಿಹಾರ ದೊರಕದ ಹೊರತು ಆ ಪ್ರಾಂತ್ಯದಲ್ಲಿ ಮತ್ತು ಜಗತ್ತಿನಲ್ಲಿ ಶಾಂತಿ ನೆಲೆಸದು,” ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕದ ಹೈಕಮಿಷನರ್ ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ. ಅವರು ಅಕ್ಟೋಬರ್ 31ರಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ಕಳೆದ ಮೂರು ವಾರಗಳಲ್ಲಿ ಇಸ್ರೇಲಿ ನಾಗರಿಕರ ಮೇಲಿನ ಹಮಾಸ್ ದಾಳಿ ಮತ್ತು ಫೆಲೆಸ್ತೀನಿ ನಾಗರಿಕರ ಹತ್ಯೆಗಳು ಹಾಗೂ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಿಂದ ಆಸ್ತಿಪಾಸ್ತಿಗಳಿಗೆ ಉಂಟಾಗಿರುವ ಅಪಾರ ಹಾನಿಯು ಯುದ್ಧದ ಮೂಲಭೂತ ನಿಯಮಗಳು, ಅಂತರರಾಷ್ಟ್ರೀಯ ಮಾನವೀಯತೆಯ ಕಾನೂನನ್ನು ನಿರ್ಲಕ್ಷ್ಯಿಸುವುದು ಅಭ್ಯಾಸವಾಗಿ ಬಿಟ್ಟಿದೆ ಎಂಬುದನ್ನು ದೃಢಪಡಿಸುತ್ತದೆ ,” ಎಂದು ಹೇಳಿದ ಅವರು ಅಮಾಯಕ ನಾಗರಿಕರ ಹತ್ಯೆಗಳು ನಡೆಯುತ್ತಿರುವ ಬಗ್ಗೆ ತಮ್ಮ ತೀವ್ರ ಆತಂಕ ವ್ಯಕ್ತಪಡಿಸಿದರು.
“ಎರಡು ಮಿಲಿಯನ್‌ಗೂ ಅಧಿಕ ಗಾಝಾದ ನಾಗರಿಕರು, ಅರ್ಧದಷ್ಟು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಮಾನವೀಯ ದೃಷ್ಟಿಯಿಂದ ಕದನ ವಿರಾಮ ಹಾಗೂ ಗಾಝಾಗೆ ಸಾಕಷ್ಟು ಅಗತ್ಯ ವಸ್ತುಗಳ ಪೂರೈಕೆ ಇಲ್ಲಿನ ಸಾವುನೋವುಗಳನ್ನು ಕಡಿಮೆಗೊಳಿಸಬಹುದು,” ಎಂದು ಹೇಳಿದ ಅವರು ವಿಶ್ವ ಸಂಸ್ಥೆಯ ಅಧ್ಯಕ್ಷರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬಹುದೆಂಬ ಆಶಾಭಾವನೆ ವ್ಯಕ್ತಪಡಿಸಿದರು.