ಜಪಾನ್ ನಲ್ಲಿ ಭೀಕರ ಕಾಡ್ಗಿಚ್ಚು: ಒಬ್ಬ ಸಾವು; 4 ಸಾವಿರ ಜನರ ಸ್ಥಳಾಂತರ
Photo : X
ಟೋಕಿಯೊ: ಜಪಾನ್ ನ ಉತ್ತರದ ಇವಾಟೆ ಪ್ರಾಂತದಲ್ಲಿ ಕಳೆದ ವಾರಾಂತ್ಯ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ತೀವ್ರಗತಿಯಲ್ಲಿ ಹರಡುತ್ತಿದ್ದು ಸುಮಾರು 6,400 ಎಕರೆ ಪ್ರದೇಶವನ್ನು ಸುಟ್ಟುಹಾಕಿದೆ. ಕಾಡ್ಗಿಚ್ಚನ್ನು ನಿಯಂತ್ರಿಸಲು 16 ಹೆಲಿಕಾಪ್ಟರ್‍ಗಳ ನೆರವಿನೊಂದಿಗೆ ಸುಮಾರು 2000 ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಳೆದ 3 ದಶಕದಲ್ಲೇ ಜಪಾನ್ ನಲ್ಲಿ ಕಾಣಿಸಿಕೊಂಡಿರುವ ಅತ್ಯಂತ ಭೀಕರ ಕಾಡ್ಗಿಚ್ಚಿಗೆ ಓರ್ವ ಬಲಿಯಾಗಿದ್ದು ಪ್ರಾಥಮಿಕ ಮಾಹಿತಿಯಂತೆ 84 ಕಟ್ಟಡಗಳಿಗೆ ಹಾನಿಯಾಗಿದೆ. ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು ಸ್ಥಳಾಂತರಗೊಳ್ಳಲು ಸಿದ್ಧವಿರುವಂತೆ 4,600 ನಿವಾಸಿಗಳಿಗೆ ಸೂಚಿಸಲಾಗಿದೆ. ಒಫುನಾಟೊ ನಗರದಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ಜನವಸತಿ ಕಟ್ಟಡಗಳತ್ತ ಬೆಂಕಿಯ ಕೆನ್ನಾಲಗೆ ವ್ಯಾಪಿಸುತ್ತಿರುವ ವೀಡಿಯೊವನ್ನು ರಾಷ್ಟ್ರೀಯ ಸುದ್ದಿವಾಹಿನಿ ಎನ್‍ಎಚ್‍ಕೆ ಪ್ರಸಾರ ಮಾಡಿದೆ. ಅಧಿಕ ತಾಪಮಾನದಿಂದಾಗಿ ಕಾಡ್ಗಿಚ್ಚು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು ಅಧಿಕ ಜನನಿಬಿಡ ನಗರ ಪ್ರದೇಶದತ್ತ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.