×
Ad

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಕಡಿಮೆ ಸುಂಕಗಳನ್ನು ಹೊಂದಿರಲಿದೆ: ಟ್ರಂಪ್

Update: 2025-07-02 17:19 IST

ಡೊನಾಲ್ಡ್ ಟ್ರಂಪ್ | PC : X 

ವಾಷಿಂಗ್ಟನ್: ಭಾರತ-ಯುಎಸ್ ವ್ಯಾಪಾರ ಮಾತುಕತೆಗಳು ಕೊನೆಯ ಹಂತವನ್ನು ತಲುಪಿದ್ದು,ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು,ಒಪ್ಪಂದವು ಕಡಿಮೆ ಸುಂಕಗಳನ್ನು ಖಚಿತಪಡಿಸುವುದರಿಂದ ಅಮೆರಿಕದ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಪೈಪೋಟಿಯೊಡ್ಡುವುದು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ನಾನು ಭಾವಿಸಿದ್ದೇನೆ ಮತ್ತು ಅದು ವಿಭಿನ್ನ ರೀತಿಯ ಒಪ್ಪಂದವಾಗಲಿದೆ. ಅದು ನಾವು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸ್ಪರ್ಧೆಯೊಡ್ಡುವುದನ್ನು ಸಾಧ್ಯವಾಗಿಸುವ ಒಪ್ಪಂದವಾಗಲಿದೆ. ಪ್ರಸ್ತುತ ಭಾರತವು ಯಾರನ್ನೂ ಒಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಆದರೆ ಭಾರತವು ಅಮೆರಿಕಕ್ಕೆ ಆ ಅವಕಾಶ ನೀಡಲಿದೆ ಎಂದು ನಾನು ಭಾವಿಸಿದ್ದೇನೆ ಮತ್ತು ಅದು ಹಾಗೆ ಮಾಡಿದರೆ ಅತ್ಯಂತ ಕಡಿಮೆ ಸುಂಕಗಳನ್ನು ಒಳಗೊಂಡಿರುವ ಒಪ್ಪಂದವನ್ನು ನಾವು ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

ಅಮೆರಿಕದಿಂದ ಆಮದುಗಳ ಮೇಲಿನ ಸುಂಕಗಳನ್ನು ತಗ್ಗಿಸಲು ಮತ್ತು ಭಾರತದ ಉತ್ಪನ್ನಗಳ ಮೇಲೆ ಅಮೆರಿಕದ ಸುಂಕಗಳು ಮುಂದಿನ ವಾರ ತೀವ್ರವಾಗಿ ಏರುವುದನ್ನು ತಪ್ಪಿಸಲು ಭಾರತ ಮತ್ತು ಅಮೆರಿಕ ಒಪ್ಪಂದಕ್ಕೆ ಸನಿಹದಲ್ಲಿವೆ ಎಂದು ಅಮೆರಿಕದ ವಿತ್ತಸಚಿವ ಸ್ಕಾಟ್ ಬೆಸೆಂಟ್ ಮಂಗಳವಾರ ಹೇಳಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಅವರ ಇಂದಿನ ಹೇಳಿಕೆ ಹೊರಬಿದ್ದಿದೆ.

ವ್ಯಾಪಾರ ಮಾತುಕತೆಗಳಲ್ಲಿ ಪ್ರಗತಿ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸುತ್ತಿದ್ದ ಬೆಸೆಂಟ್, ‘ನಾವು ಭಾರತಕ್ಕೆ ತುಂಬ ಹತ್ತಿರವಾಗಿದ್ದೇವೆ’ ಎಂದು ಹೇಳಿದ್ದರು.

ಈ ನಡುವೆ ಭಾರತದಿಂದ ಆಮದುಗಳ ಮೇಲೆ ಹೆಚ್ಚಿನ ಪ್ರತಿಸುಂಕ ಹೇರಿಕೆಗೆ ಟ್ರಂಪ್ ಘೋಷಿಸಿದ್ದ 90 ದಿನಗಳ ವಿರಾಮ ಜು.9ರಂದು ಅಂತ್ಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News