×
Ad

ಒತ್ತೆಯಾಳುಗಳ ಮೃತದೇಹ ಹಿಂದಿರುಗಿಸಲು 48 ಗಂಟೆಗಳ ಗಡುವು ನೀಡಿದ ಟ್ರಂಪ್

Update: 2025-10-26 21:38 IST

ಡೊನಾಲ್ಡ್ ಟ್ರಂಪ್ |Photo Credit : X 

ವಾಷಿಂಗ್ಟನ್, ಅ.26: ಗಾಝಾದಲ್ಲಿ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ಕದನ ವಿರಾಮ ಒಪ್ಪಂದದ ಪ್ರಕಾರ ಒತ್ತೆಯಾಳುಗಳ ಮೃತದೇಹಗಳನ್ನು ತ್ವರಿತವಾಗಿ ಹಿಂದಿರುಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ಹಮಾಸ್ ತನ್ನ ಬಾಧ್ಯತೆಗಳನ್ನು ಅನುಸರಿಸಬೇಕು. ಮುಂದಿನ 48 ಗಂಟೆ ಹಮಾಸ್‍ ನ ಕ್ರಮಗಳನ್ನು ನಿಕಟವಾಗಿ ಗಮನಿಸುತ್ತೇನೆ. ಹಮಾಸ್ ತನ್ನ ಬಾಧ್ಯತೆಗಳಿಗೆ ವಿಫಲವಾದರೆ ಹಾಲಿ ಶಾಂತಿ ಯೋಜನೆಯಲ್ಲಿ ಒಳಗೊಂಡಿರುವ ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತವೆ. ಇಬ್ಬರು ಅಮೆರಿಕನ್ನರು ಸೇರಿದಂತೆ ಮೃತ ಒತ್ತೆಯಾಳುಗಳ ದೇಹವನ್ನು ಹಮಾಸ್ ತಕ್ಷಣ ಹಿಂದಿರುಗಿಸಬೇಕು. ಕೆಲವು ಮೃತದೇಹಗಳನ್ನು ಪತ್ತೆಹಚ್ಚಲು ಕಷ್ಟವಾಗಬಹುದು. ಆದರೆ ಉಳಿದ ಮೃತದೇಹಗಳ ಹಸ್ತಾಂತರವನ್ನು ಹಮಾಸ್ ಕಾರಣವಿಲ್ಲದೆ ತಡೆಹಿಡಿದಿದೆ. ಬಹುಷಃ ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬ ಷರತ್ತಿಗೂ ಇದಕ್ಕೂ ಸಂಬಂಧವಿರಬಹುದು. ಆದರೆ ಮಧ್ಯಪ್ರಾಚ್ಯದಲ್ಲಿ ಈಗ ನೆಲೆಸಿರುವ ಬಲವಾದ ಶಾಂತಿಯನ್ನು ಶಾಶ್ವತವಾಗಿಸುವ ಪ್ರಯತ್ನಕ್ಕೆ ಹಮಾಸ್ ತೊಡಕಾಗಬಾರದು' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕದನ ವಿರಾಮ ಒಪ್ಪಂದದ ಪ್ರಕಾರ ಎರಡೂ ಕಡೆಯವರನ್ನು(ಇಸ್ರೇಲ್ ಮತ್ತು ಹಮಾಸ್) ನ್ಯಾಯಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಈ ಹಿಂದಿನ ತನ್ನ ಹೇಳಿಕೆಯನ್ನು ಉಲ್ಲೇಖಿಸಿರುವ ಟ್ರಂಪ್ `ಇದು ಎರಡೂ ಕಡೆಯವರು ಶಾಂತಿ ಬದ್ಧತೆಗಳನ್ನು ಅನುಸರಿಸುವ ಷರತ್ತಿಗೆ ಒಳಪಟ್ಟಿದೆ. ಮುಂದಿನ 2 ದಿನಗಳ ಬೆಳವಣಿಗೆಯು ಅತ್ಯಂತ ನಿರ್ಣಾಯಕವಾಗಿದೆ. ಅವರು (ಹಮಾಸ್) ಏನು ಮಾಡುತ್ತಾರೆ ಎಂಬುದನ್ನು ನಿಕಟವಾಗಿ ಗಮನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದ ಪ್ರಕಾರ ಹಮಾಸ್ ಎಲ್ಲಾ ಜೀವಂತ ಮತ್ತು ಮೃತ ಒತ್ತೆಯಾಳುಗಳನ್ನು ಹಿಂದಿರುಗಿಸಬೇಕು. ಇದುವರೆಗೆ ಹಮಾಸ್ 20 ಜೀವಂತ ಒತ್ತೆಯಾಳುಗಳು ಮತ್ತು 15 ಮೃತದೇಹಗಳನ್ನು ಹಿಂದಿರುಗಿಸಿದ್ದು ಇನ್ನೂ 13 ಮೃತದೇಹಗಳನ್ನು ಹಸ್ತಾಂತರಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News