ಟ್ರಂಪ್ ಬೆದರಿಕೆಗೆ ಕೊಲಂಬಿಯಾ ಅಧ್ಯಕ್ಷರ ತೀಕ್ಷ್ಣ ಪ್ರತಿಕ್ರಿಯೆ
ಗುಸ್ತಾವೊ ಪೆಟ್ರೊ , ಡೊನಾಲ್ಡ್ ಟ್ರಂಪ್ | Photo Credit : AP \ PTI
ಬೊಗೊಟ, ಜ.5: ವೆನೆಝುವೆಲಾದ ಅಧ್ಯಕ್ಷರಿಗಾದ ಗತಿಯೇ ಕೊಲಂಬಿಯಾ ಅಧ್ಯಕ್ಷರಿಗೂ ಬರಬಹುದು, ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ `ನೀವು ಜನರ ಕಮಾಂಡರ್ ಅನ್ನು ಎದುರಿಸುತ್ತಿದ್ದೀರಿ' ಎಂದಿದ್ದು ಮಾದಕ ವಸ್ತು ವಿರುದ್ಧ ಸರಕಾರದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
`ಟ್ರಂಪ್ ಅವರ ಹೇಳಿಕೆಯ ಇಂಗ್ಲಿಷ್ ಅನುವಾದವನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸುತ್ತೇನೆ. ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನೇ ಟ್ರಂಪ್ ಹೇಳಿದ್ದಾರೆಯೇ ಎಂಬುದನ್ನು ನೋಡಬೇಕು. ಟ್ರಂಪ್ ಅವರ ಕಾನೂನುಬಾಹಿರ ಬೆದರಿಕೆಯ ಅರ್ಥವೇನೆಂದು ತಿಳಿದ ನಂತರ ನಾನು ಅವರಿಗೆ ಪ್ರತಿಕ್ರಿಯಿಸುತ್ತೇನೆ' ಎಂದು ಪೆಟ್ರೋ ಹೇಳಿದ್ದಾರೆ.
ಕೊಲಂಬಿಯಾದ ಸಾಂವಿಧಾನಿಕ ಚೌಕಟ್ಟನ್ನು ಪೆಟ್ರೋ ತಪ್ಪಾಗಿ ಪ್ರತಿನಿಧಿಸುತ್ತಿದ್ದಾರೆ ಎಂಬ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಹೇಳಿಕೆಗೆ ಪ್ರತಿಕ್ರಿಯಿಸಿದ ಪೆಟ್ರೋ ` ಕೊಲಂಬಿಯಾದ ಅಧ್ಯಕ್ಷರು ಕಾನೂನಿನ ಪ್ರಕಾರ, ಮಿಲಿಟರಿ ಮತ್ತು ಪೊಲೀಸ್‍ನ ಸರ್ವೋಚ್ಛ ಕಮಾಂಡರ್ ಆಗಿದ್ದಾರೆ. ತಮ್ಮ ಸರಕಾರ ಕೋಕಾ ಕೃಷಿಯ ವಿಸ್ತರಣೆಯನ್ನು ತಡೆದಿದೆ ಮತ್ತು ಸುಮಾರು 30,000 ಹೆಕ್ಟೇರ್‍ಗಳಲ್ಲಿ ಸ್ವಯಂಪ್ರೇರಿತ ಬೆಳೆ ಪರ್ಯಾಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಆದ್ದರಿಂದ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯಿಲ್ಲದೆ ನೀವು ಇದರಲ್ಲಿ ಯಾವುದೇ ಒಂದು ಗುಂಪಿನ ಮೇಲೆ ದಾಳಿ ನಡೆಸಿದರೂ ಹಲವಾರು ಮಕ್ಕಳು, ರೈತರನ್ನು, ಅಮಾಯಕ ನಾಗರಿಕರನ್ನು ಕೊಂದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಕೊಲಂಬಿಯಾದ ಸಂವಿಧಾನ ಮತ್ತು ಸಾರ್ವಭೌಮತ್ವಕ್ಕೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ ಪೆಟ್ರೋ, ವಿದೇಶದ ಪ್ರಭಾವದ ಬದಲು ರಾಷ್ಟ್ರಧ್ವಜಕ್ಕೆ ಆದ್ಯತೆ ನೀಡುವಂತೆ ಭದ್ರತಾ ಪಡೆಗಳಿಗೆ ಸೂಚಿಸಿದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸುವ ಕಾರ್ಯದಲ್ಲಿ ಕೊಲಂಬಿಯಾದ ಜನರ ಮೇಲೆ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.