ಹಂಗೇರಿಯಲ್ಲಿ ಪುಟಿನ್ ಜೊತೆ ಮಾತುಕತೆ: ಟ್ರಂಪ್ ಘೋಷಣೆ
ಡೊನಾಲ್ಡ್ ಟ್ರಂಪ್ , ವ್ಲಾದಿಮಿರ್ ಪುಟಿನ್ | Photo Credit : AP
ವಾಷಿಂಗ್ಟನ್, ಅ.17: ಹಂಗೇರಿಯ ಬುದಾಪೆಸ್ಟ್ ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರನ್ನು ಭೇಟಿಯಾಗಿ ಉಕ್ರೇನ್‍ನಲ್ಲಿನ ಯುದ್ಧದ ಬಗ್ಗೆ ಮಾತುಕತೆ ನಡೆಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗುರುವಾರ ರಶ್ಯ ಅಧ್ಯಕ್ಷರ ಜೊತೆ ದೂರವಾಣಿಯಲ್ಲಿ ನಡೆಸಿದ ಮಾತುಕತೆ ಅತ್ಯಂತ ಉತ್ಪಾದಕವಾಗಿತ್ತು. ಉಕ್ರೇನ್ ಬಿಕ್ಕಟ್ಟನ್ನು ಇತ್ಯರ್ಥಗೊಳಿಸಲು ತಾನು ಮುಕ್ತವಾಗಿರುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ. ರಶ್ಯ ಮತ್ತು ಉಕ್ರೇನ್ ನಡುವಿನ ಈ `ಕುಖ್ಯಾತ' ಯುದ್ಧವನ್ನು ಕೊನೆಗೊಳಿಸಬಹುದೇ ಎಂಬ ಬಗ್ಗೆ ಚರ್ಚಿಸಲು ನಾವಿಬ್ಬರು ಎರಡು ವಾರಗಳೊಳಗೆ ಬುದಾಪೆಸ್ಟ್‍ನಲ್ಲಿ ಸಭೆ ಸೇರಲಿದ್ದೇವೆ. ಇದಕ್ಕೂ ಮುನ್ನ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿಯನ್ನು ಭೇಟಿಯಾಗಲಿದ್ದು ಪುಟಿನ್ ಜೊತೆ ದೂರವಾಣಿಯಲ್ಲಿ ನಡೆಸಿದ ಮಾತುಕತೆಯ ಬಗ್ಗೆ ಚರ್ಚಿಸಲಿದ್ದೇವೆ' ಎಂದು ಟ್ರಂಪ್ `ಟ್ರುಥ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದಿನ ವಾರ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಮತ್ತು ರಶ್ಯ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ನಡುವೆ ನಡೆಯುವ ಸಭೆಯಲ್ಲಿ ಟ್ರಂಪ್-ಪುಟಿನ್ ಸಭೆಯ ದಿನಾಂಕ ಹಾಗೂ ಸ್ವರೂಪವನ್ನು ಅಂತಿಮಗೊಳಿಸಲಾಗುವುದು ಎಂದು ರಶ್ಯ ಅಧ್ಯಕ್ಷರ ಕಚೇರಿಯ ವಕ್ತಾರ ಯೂರಿ ಉಷಕೋವ್ ಹೇಳಿದ್ದಾರೆ.