ವಿಶ್ವಸಂಸ್ಥೆ ಭೇಟಿ ವೇಳೆ ಮುಜುಗರಕ್ಕೊಳಗಾದ ಟ್ರಂಪ್; ಅರ್ಧಕ್ಕೆ ನಿಂತ ಎಸ್ಕಲೇಟರ್, ಕೈಕೊಟ್ಟ ಮೈಕ್, ಟೆಲಿಪ್ರಾಂಪ್ಟರ್ !
PC: x.com/VirginiePerez15
ವಿಶ್ವಸಂಸ್ಥೆ: ವಿಶ್ವಸಂಸ್ಥೆ ಭೇಟಿಗೆ ತೆರಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಮುಜುಗರದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಸಭಾಂಗಣದಲ್ಲಿ ಟ್ರಂಪ್ ಮಾತನಾಡುವ ವೇಳೆ ಧ್ವನಿ ವ್ಯವಸ್ಥೆ ಕೈಕೊಟ್ಟರೆ, ಸಭಾಂಗಣಕ್ಕೆ ಪತ್ನಿ ಮೆಲೀನಾ ಜೊತೆ ಆಗಮಿಸುತ್ತಿದ್ದಾಗ ಎಸ್ಕಲೇಟರ್ ಕೆಟ್ಟು ನಿಂತಿತು. ಆಧಾರಕ್ಕೆ ಹ್ಯಾಂಡ್‌ರೈಲ್ ಹಿಡಿದುಕೊಂಡ ಕಾರಣ ಗಾಯಗೊಳ್ಳುವುದು ತಪ್ಪಿತು. ಅಂತೆಯೇ ಟ್ರಂಪ್ ಭಾಷಣಕ್ಕೆ ವ್ಯವಸ್ಥೆಗೊಳಿಸಿದ್ದ ಟೆಲಿಪ್ರಾಂಪ್ಟರ್ ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿಲ್ಲ.
ಈ ಬಗ್ಗೆ ತಮ್ಮ ಭಾಷಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಟ್ರಂಪ್ ಇದು ಒಳಸಂಚು ಎಂದು ಆಪಾದಿಸಿದರು. ಟ್ರಂಪ್ ಗೆ ವ್ಯವಸ್ಥೆಗೊಳಿಸಿದ್ದ ಟೆಲಿಪ್ರಾಂಪ್ಟರ್ 15 ನಿಮಿಷ ಕಾಲ ನಿಷ್ಕ್ರಿಯವಾದ್ದನ್ನು ಉಲ್ಲೇಖಿಸಿ, ಅದರ ಸಹಾಯವಿಲ್ಲದೇ ಭಾಷಣ ಮಾಡಿದರು. ಧ್ವನಿ ವ್ಯವಸ್ಥೆ ಕೂಡಾ ಕೈಕೊಟ್ಟ ಹಿನ್ನೆಲೆಯಲ್ಲಿ ಹಲವು ಮಂದಿ ಟ್ರಂಪ್ ಭಾಷಣವನ್ನು ಕೇಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಇದು ಖಂಡಿತವಾಗಿಯೂ ಒಳಸಂಚು" ಎಂದು ಲಂಡನ್ ಟೈಮ್ಸ್ ಆರೋಪಿಸಿದೆ.
ಎಸ್ಕಲೇಟರ್ ಆಫ್ ಮಾಡುವ ಪ್ರಹಸನವನ್ನು ವಿಶ್ವಸಂಸ್ಥೆ ಸಿಬ್ಬಂದಿ ಮಾಡಿದ್ದಾರೆ ಎಂದು ಟ್ರಂಪ್ ಟ್ರುಥ್ ಸೋಶಿಯಲ್ ನಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಭಾಷಣದ ಕೊನೆಯಲ್ಲಿ ಧ್ವನಿ ವ್ಯವಸ್ಥೆ ಕೈಕೊಟ್ಟ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ಸಾಲಿನಲ್ಲೇ ಆಸೀನರಾಗಿದ್ದ ಅಮೆರಿಕದ 'ಪ್ರಥಮ ಮಹಿಳೆ' ಮೆಲೀನಾ ಅವರಿಗೂ ಒಂದು ಶಬ್ದವೂ ಕೇಳಿಸಿಲ್ಲ ಎಂದು ಅಣಕವಾಡಿದರು. ಈ ಮೂರು ಘಟನೆಗಳನ್ನು ತ್ರಿವಳಿ ಒಳಸಂಚು ಎಂದು ಟೀಕಿಸಿದ ಟ್ರಂಪ್, ಇದಕ್ಕೆ ಕಾರಣರಾದವರಿಗೆ ನಾಚಿಕೆಯಾಗಬೇಕು ಎಂದು ಜರೆದರು.
ಎಸ್ಕಲೇಟರ್ ನ ಭದ್ರತಾ ದೃಶ್ಯಾವಳಿಗಾಗಿ ಕೋರಿದ ಟ್ರಂಪ್ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದು, ಇದರಲ್ಲಿ ಸೀಕ್ರೆಟ್ ಸರ್ವೀಸ್ ಷಾಮೀಲಾಗಿರುವುದು ದೃಢಪಟ್ಟಿದೆ ಎಂದು ಹೇಳಿದರು.