×
Ad

ಚೀನಾ, ಭಾರತದ ಮೇಲೆ ಶೇ. 100ರಷ್ಟು ಸುಂಕ ವಿಧಿಸಿ: ಯೂರೋಪಿಯನ್ ಒಕ್ಕೂಟಕ್ಕೆ ಟ್ರಂಪ್ ಕರೆ

Update: 2025-09-10 12:47 IST

ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಕಾರ್ಯತಂತ್ರದ ಭಾಗವಾಗಿ ಚೀನಾ ಮತ್ತು ಭಾರತದ ಮೇಲೆ ಶೇ. 100ರಷ್ಟು ಸುಂಕ ವಿಧಿಸುವಂತೆ ಯೂರೋಪಿಯನ್ ಒಕ್ಕೂಟದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ.

ಈ ವಿಷಯವನ್ನು ಅಮೆರಿಕದ ಅಧಿಕಾರಿ ಹಾಗೂ ಯೂರೋಪಿಯನ್ ಒಕ್ಕೂಟದ ರಾಜತಾಂತ್ರಿಕರೊಬ್ಬರು ದೃಢಪಡಿಸಿದ್ದಾರೆ.

“ಚೀನಾ ಮತ್ತು ಭಾರತ ರಶ್ಯದ ಪ್ರಮುಖ ತೈಲ ಖರೀದಿ ದೇಶಗಳಾಗಿವೆ. 2022ರಿಂದ ಉಕ್ರೇನ್ ಮೇಲೆ ರಶ್ಯ ನಿರಂತರವಾಗಿ ದಾಳಿ ನಡೆಸುತ್ತಲೇ ಬರುತ್ತಿದೆ. ಹೀಗಿದ್ದೂ, ರಶ್ಯದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಚೀನಾ ಮತ್ತು ಭಾರತ ಪ್ರಮುಖ ಪಾತ್ರ ವಹಿಸುತ್ತಿವೆ” ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯೂರೋಪಿಯನ್ ಒಕ್ಕೂಟದ ರಾಯಭಾರಿ ಡೇವಿಡ್ ಸುಲ್ಲಿವಾನ್ ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಚೀನಾ ಮೇಲೆ ಸುಂಕ ವಿಧಿಸುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ವೇಳೆ ಯೂರೋಪಿಯನ್ ಒಕ್ಕೂಟ ಅಮೆರಿಕದ ಮನವಿಯನ್ನು ಮನ್ನಿಸಿದರೆ, ಅಮೆರಿಕ ಕೂಡಾ ಇಂತಹುದೇ ಸುಂಕಗಳನ್ನು ವಿಧಿಸಲು ಸಿದ್ಧವಿರುವುದಾಗಿಯೂ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು ಹೇಳಲಾಗಿದೆ.

ರಶ್ಯದಿಂದ ತೈಲ ಖರೀದಿ ಮಾಡುತ್ತಿರುವುದರಿಂದ ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರು. ಇದರಿಂದ, ಉಭಯ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News