ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥರ ಗುಣಗಾನ ಮಾಡಿದ ಟ್ರಂಪ್!
PC: x.com/izaigi
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರನ್ನು ಓವಲ್ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿಗೆ ಮುನ್ನ ಉಭಯ ನಾಯಕರನ್ನು "ಸರ್ವಶ್ರೇಷ್ಠ ನಾಯಕರು" ಎಂದು ಗುಣಗಾನ ಮಾಡಿದರು.
"ಶ್ರೇಷ್ಠ ನಾಯಕರು ಬರುತ್ತಿದ್ದಾರೆ; ಪಾಕಿಸ್ತಾನದ ಪ್ರಧಾನಿ ಹಾಗೂ ಫೀಲ್ಡ್ ಮಾರ್ಷಲ್. ಫೀಲ್ಡ್ ಮಾರ್ಷಲ್ ಅದ್ಭುತ ವ್ಯಕ್ತಿ, ಅಂತೆಯೇ ಪ್ರಧಾನಿ ಕೂಡಾ. ಇಬ್ಬರೂ ಬರುತ್ತಿದ್ದಾರೆ. ಇಷ್ಟರಲ್ಲೇ ಈ ಕೊಠಡಿಗೆ ಬರಲಿದ್ದಾರೆ" ಎಂದು ಭೇಟಿಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಕೊನೆಗೊಳಿಸಲು ಕಾರ್ಯತಂತ್ರ ರೂಪಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇಳೆ ಟ್ರಂಪ್ ಅವರನ್ನು ಭೇಟಿ ಮಾಡಿದ ಎಂಟು ಮಂದಿ ಇಸ್ಲಾಮಿಕ್ ದೇಶಗಳ ಮುಖಂಡರಲ್ಲಿ ಶೆಹಬಾಝ್ ಶರೀಫ್ ಕೂಡಾ ಒಬ್ಬರು. ಪಾಕಿಸ್ತಾನ ನಾಯಕರ ಭೇಟಿ ಬಳಿಕ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವೂ ನಡೆಯುವ ನಿರೀಕ್ಷೆ ಇದೆ.
ಕಳೆದ ಜುಲೈನಲ್ಲಿ ಉಭಯ ದೇಶಗಳು ಮಾಡಿಕೊಂಡ ಒಪ್ಪಂದದಂತೆ ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಹೊರತೆಗೆಯುವ ನಿಟ್ಟಿನಲ್ಲಿ ಅಮೆರಿಕ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಲಿದ್ದು, ಸುಂಕವನ್ನೂ ಕಡಿತಗೊಳಿಸಲಾಗುತ್ತದೆ. ಹಿಂದೆ ಭಯೋತ್ಪಾದಕರ ಸ್ವರ್ಗ ಎಂದು ಟ್ರಂಪ್ ಬಣ್ಣಿಸಿದ್ದ ದೇಶದ ಜತೆ ಅಮೆರಿಕ ಮೈತ್ರಿ ಬೆಳೆಸಿರುವುದು ಅಚ್ಚರಿಗೆ ಕಾರಣವಾಗಿದೆ.