ಭಾರತ - ಪಾಕ್ ಯುದ್ಧದ ವೇಳೆ ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು: ಡೊನಾಲ್ಡ್ ಟ್ರಂಪ್ ಪುನರುಚ್ಛಾರ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ನ್ಯೂಯಾರ್ಕ್: ಸೇನಾ ಸಮರವನ್ನು ಮುಂದುವರಿಸಿದರೆ, ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಲಾಗುವುದು ಎಂದು ಬೆದರಿಕೆಯೊಡ್ಡುವ ಮೂಲಕ, ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಒಪ್ಪಂದವೇರ್ಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಈ ಹಿಂದೆಯೂ ಕೂಡಾ ಅವರು ಹಲವು ಬಾರಿ ಈ ಹೇಳಿಕೆಯನ್ನು ನೀಡಿದ್ದರು.
ಬುಧವಾರ ಮಿಯಾಮಿಯಲ್ಲಿ ಆಯೋಜನೆಗೊಂಡಿದ್ದ ಅಮೆರಿಕ ಬಿಸಿನೆಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, “ಕಳೆದ ಎಂಟು ತಿಂಗಳಲ್ಲಿ ನಾನು ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಕೊಸೊವೊ ಮತ್ತು ಸೆರ್ಬಿಯಾ ಹಾಗೂ ಕಾಂಗೊ ಮತ್ತು ರುವಾಂಡ ನಡುವಿನ ಯುದ್ಧಗಳು ಸೇರಿದಂತೆ ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನೂ ನಾನೇ ಅಂತ್ಯಗೊಳಿಸಿದೆ” ಎಂದು ಹೇಳಿದರು.
“ನಾನು ಕೆಲವು ದಿನಪತ್ರಿಕೆಗಳ ಮುಖಪುಟಗಳನ್ನು ಓದುವಾಗ, ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಹೋಗುತ್ತಿವೆ ಎಂದು ಕೇಳಲ್ಪಟ್ಟೆ. ಆ ವೇಳೆಗೆ ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಎಂಟನೆ ವಿಮಾನವಂತೂ ತೀರಾ ಕೆಟ್ಟದಾಗಿ ಹಾನಿಗೊಳಗಾಗಿತ್ತು. ಎಂಟು ವಿಮಾನಗಳನ್ನು ಹೊಡೆದುರುಳಿಸುವುದು ಸಾಕಷ್ಟಾಗಿತ್ತು” ಎಂದು ಅವರು ತಿಳಿಸಿದರು.
“ಅಣ್ವಸ್ತ್ರ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಹೋಗುತ್ತಿವೆ ಎಂದು ನನಗೆ ತಿಳಿಯಿತು. ಆಗ ನಾನು, ನೀವು ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ, ನಾನು ನಿಮ್ಮೊಂದಿಗೆ ವ್ಯಾಪಾರ ನಡೆಸುವುದಿಲ್ಲ ಎಂದು ಬೆದರಿಕೆಯೊಡ್ಡಿದೆ” ಎಂದೂ ಅವರು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಈ ಪ್ರತಿಪಾದನೆಯನ್ನು ಭಾರತ ಪದೇ ಪದೇ ನಿರಾಕರಿಸುತ್ತಿದ್ದರೂ, ಡೊನಾಲ್ಡ್ ಟ್ರಂಪ್ ಮಾತ್ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ಅಂತ್ಯಗೊಳಿಸಿದ್ದು ನಾನೇ ಎಂದು ಹೇಳುತ್ತಿದ್ದಾರೆ.