ಹಿಂಸಾಚಾರ ಮುಂದುವರಿದರೆ ಹಮಾಸ್ ನಾಶಪಡಿಸದೆ ಬೇರೆ ಆಯ್ಕೆಯಿಲ್ಲ: ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಅ.17: ಗಾಝಾದಲ್ಲಿ ಆಂತರಿಕ ಘರ್ಷಣೆ ಮತ್ತು ಹಿಂಸಾಚಾರ ಮುಂದುವರಿದರೆ ನಮಗೆ ಅಲ್ಲಿಗೆ ಹೋಗಿ ಹಮಾಸ್ ಗುಂಪನ್ನು ನಾಶಪಡಿಸದೆ ಬೇರೆ ಆಯ್ಕೆಗಳಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಸಾವನ್ನಪ್ಪಿದ ಒತ್ತೆಯಾಳುಗಳ ಮೃತದೇಹವನ್ನು ಒಪ್ಪಂದದ ಪ್ರಕಾರ ಹಸ್ತಾಂತರಿಸಲು ಹಮಾಸ್ ವಿಳಂಬ ಮಾಡುತ್ತಿದೆ ಎಂಬ ಇಸ್ರೇಲ್‍ನ ಆರೋಪದ ನಡುವೆಯೇ ಟ್ರಂಪ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇಸ್ರೇಲ್ ಜೊತೆ ಶಾಮೀಲಾಗಿರುವ ಆರೋಪದಲ್ಲಿ ಈ ವಾರದ ಆರಂಭದಲ್ಲಿ ಹಮಾಸ್ 7 ಫೆಲೆಸ್ತೀನಿಯರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. `ಇದು ಗ್ಯಾಂಗ್‍ಗಳ ನಡುವಿನ ಘರ್ಷಣೆ. ಅಮೆರಿಕಾದಲ್ಲೂ ಗ್ಯಾಂಗ್ ವಾರ್ ನಡೆಯುತ್ತಿದೆ, ವೆನೆಝುವೆಲಾದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ದೋಣಿಗಳ ಮೇಲೆಯೂ ಇದೇ ರೀತಿ ದಾಳಿ ನಡೆಯುತ್ತಿದೆ' ಎಂದು ಆಗ ಟ್ರಂಪ್ ಪ್ರತಿಕ್ರಿಯಿಸಿದ್ದರು.
ಆದರೆ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್ `ಇಂತಹ ಹತ್ಯೆಗಳು ಒಪ್ಪಂದದ ಭಾಗವಲ್ಲ' ಎಂದು ಹಮಾಸ್‍ಗೆ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಗಾಝಾದಲ್ಲಿ ಉಳಿದಿರುವ 19 ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಹಿಂತಿರುಗಿಸದಿದ್ದರೆ ಹಮಾಸ್ ಜೊತೆಗಿನ ಕದನ ವಿರಾಮವನ್ನು ಕೊನೆಗೊಳಿಸಬೇಕೆಂದು ಒತ್ತೆಯಾಳುಗಳ ಕುಟುಂಬದವರು ಒತ್ತಾಯಿಸಿದ್ದಾರೆ. `ಹಮಾಸ್ ಮೇಲಿನ ಒತ್ತಡವನ್ನು ದುರ್ಬಲಗೊಳಿಸುವ ಮತ್ತು ಒತ್ತೆಯಾಳುಗಳ ಮೃತದೇಹವನ್ನು ಹಿಂತಿರುಗಿಸದೆ ಒಪ್ಪಂದವನ್ನು ಮುಂದುವರಿಸಲು ಅವಕಾಶ ನೀಡುವ ಯಾವುದೇ ನಿರ್ಧಾರವು ಗಂಭೀರ ನೈತಿಕ ಮತ್ತು ನಾಯಕತ್ವದ ವೈಫಲ್ಯವಾಗಿದೆ' ಎಂದವರು ಪ್ರತಿಪಾದಿಸಿದ್ದಾರೆ.