×
Ad

ಮಾಧ್ಯಮ ದಿಗ್ಗಜ ರೂಪರ್ಟ್ ಮರ್ಡೋಕ್ ವಿರುದ್ಧ ಟ್ರಂಪ್ ದಾವೆ

Update: 2025-07-19 08:15 IST

PC: x.com/bsindia

ವಾಷಿಂಗ್ಟನ್: ವಾಲ್‌ಸ್ಟ್ರೀಟ್ ಜರ್ನಲ್ ನ ಇಬ್ಬರು ವರದಿಗಾರರು, ಡಾ ಜೋನ್ಸ್ ನ್ಯೂಸ್ ಕಾರ್ಪೋರೇಷನ್ ಮತ್ತು ಪತ್ರಿಕೆಯ ಮಾಲೀಕರಾದ ರೂಪರ್ಟ್ ಮರ್ಡೋಕ್ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನಹಾನಿ ಮತ್ತು ನಿಂದನೆ ದಾವೆ ಹೂಡಿದ್ದಾರೆ.

ಲೈಂಗಿಕ ಅಪರಾಧದಲ್ಲಿ ಶಿಕ್ಷೆಗೆ ಒಳಗಾಗಿದ್ದ ಜೆಫ್ರಿ ಎಪ್ಸ್ಟೀನ್ ಎಂಬಾತನಿಗೆ 2003ರಲ್ಲಿ ಲೈಂಗಿಕ ಇರಾದೆಯ ಹುಟ್ಟುಹಬ್ಬದ ಪತ್ರವನ್ನು ಟ್ರಂಪ್ ನೀಡಿದ್ದರು ಎಂದು ಆರೋಪಿಸಿದ ವರದಿಯನ್ನು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ ಮರುದಿನವೇ ಕಾನೂನು ಕ್ರಮ ಕೈಗೊಂಡಿದ್ದಾರೆ. ಪತ್ರಿಕೆ ವಿರುದ್ಧ "ಪವರ್ ಹೌಸ್ ಲಾಸೂಟ್" ಸಲ್ಲಿಸಿರುವುದಾಗಿ ಟ್ರಂಪ್ ಟ್ರುಥ್ ಸೋಶಿಯಲ್ ನಲ್ಲಿ ಪ್ರಕಟಿಸಿದ್ದಾರೆ.

ಈ ತಪ್ಪು, ಅವಮಾನಕರ, ಮಾನಹಾನಿಕರ, ಸುಳ್ಳು ಸುದ್ದಿಯ ಲೇಖನವನ್ನು ವಾಲ್‌ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಿಸಿದ್ದಕ್ಕಾಗಿ ಇದರಲ್ಲಿ ಷಾಮೀಲಾದ ಎಲ್ಲರ ವಿರುದ್ಧವೂ ಪವರ್ ಹೌಸ್ ಲಾಸೂಟ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರೂಪರ್ಟ್ ಮರ್ಡೋಕ್ ಮತ್ತು ರಾಬರ್ಟ್ ಥಾಮ್ಸನ್ ಸೇರಿದಂತೆ ಈ ಮಾನಹಾನಿಕರ ವರದಿಯ ಪ್ರಕಾಶಕರ ವಿರುದ್ಧ, ಕಾರ್ಪೊರೇಟ್ ಮಾಲೀಕರ ವಿರುದ್ಧ ಈ ಐತಿಹಾಸಿಕ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮಿಯಾಮಿಯಲ್ಲಿರುವ ಫ್ಲೋರಿಡಾ ದಕ್ಷಿಣ ಜಿಲ್ಲೆಯ ಫೆಡರಲ್ ಕೋರ್ಟ್ ನಲ್ಲಿ ಈ ದಾವೆ ಹೂಡಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಟ್ರಂಪ್ 2003ರಲ್ಲಿ ಜೆಫ್ರಿ ಎಪ್ಸ್ಟೀನ್ ಗೆ ಜನ್ಮದಿನ ಪತ್ರವನ್ನು ಕಳುಹಿಸಿದ್ದಾರೆ ಎನ್ನಲಾಗಿದ್ದು, ಇದರಲ್ಲಿ ಸಂಪೂರ್ಣ ನಗ್ನ ರೇಖಾಚಿತ್ರಗಳು, ಟ್ರಂಪ್ ಅವರ ಸಹಿ ಇದ್ದು, ಪರಸ್ಪರರ ರಹಸ್ಯದ ಬಗ್ಗೆ ಉಲ್ಲೇಖವೂ ಇತ್ತು ಎಂಬ ವರದಿಯನ್ನು ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News