×
Ad

ಶಸ್ತ್ರಾಸ್ತ್ರ ಕೆಳಗಿಳಿಸದಿದ್ದರೆ ಸಮಾಧಿ ಮಾಡುತ್ತೇವೆ: ಸಿರಿಯಾದ ಕುರ್ದಿಶ್ ಹೋರಾಟಗಾರರಿಗೆ ಟರ್ಕಿ ಎಚ್ಚರಿಕೆ

Update: 2024-12-26 21:43 IST

ತಯ್ಯಿಪ್ ಎರ್ದೋಗನ್ | PTI

ಅಂಕಾರ: ಸಿರಿಯಾದಲ್ಲಿನ ಕುರ್ದಿಶ್ ಸಶಸ್ತ್ರ ಹೋರಾಟಗಾರರು ಶಸ್ತ್ರಾಸ್ತ್ರ ಕೆಳಗಿಳಿಸಬೇಕು ಅಥವಾ ಸಮಾಧಿಯಾಗಬೇಕು ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ದೋಗನ್ ಹೇಳಿದ್ದಾರೆ.

ಸಿರಿಯಾದಲ್ಲಿ ಬಶರ್ ಅಸ್ಸಾದ್ ಸರಕಾರ ಪತನದ ಬಳಿಕ ಟರ್ಕಿ ಬೆಂಬಲಿತ ಸಿರಿಯಾ ಹೋರಾಟಗಾರರು ಹಾಗೂ ಕುರ್ದಿಶ್ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವೆ ಸಂಘರ್ಷ ಮುಂದುವರಿದಿದೆ. ಸಿರಿಯಾದಲ್ಲಿ ಆಡಳಿತ ಬದಲಾವಣೆಯು ದೇಶದ ಪ್ರಮುಖ ಕುರ್ದಿಶ್ ಬಣಗಳನ್ನು ಹಿಮ್ಮೆಟ್ಟುವಂತೆ ಮಾಡಿದೆ. ಕುರ್ದಿಶ್‍ನ ಅಂಗಸಂಸ್ಥೆ ವೈಪಿಜಿ ಸಶಸ್ತ್ರ ಹೋರಾಟಗಾರರ ಗುಂಪಿಗೆ ಸಿರಿಯಾದಲ್ಲಿ ಯಾವುದೇ ಸ್ಥಾನವಿಲ್ಲ. ಅದನ್ನು ವಿಸರ್ಜಿಸಬೇಕು ಎಂದು ಟರ್ಕಿ ಪ್ರತಿಪಾದಿಸುತ್ತಿದೆ. `ಪ್ರತ್ಯೇಕತಾವಾದಿ ಕೊಲೆಗಡುಕರು ತಮ್ಮ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಬೇಕು. ಇಲ್ಲದಿದ್ದರೆ ಅವರನ್ನು ಅವರ ಶಸ್ತ್ರಾಸ್ತ್ರಗಳೊಂದಿಗೆ ಸಿರಿಯಾದ ಭೂಮಿಯಲ್ಲಿ ಸಮಾಧಿ ಮಾಡಲಾಗುವುದು. ನಮ್ಮ ಮತ್ತು ನಮ್ಮ ಕುರ್ದಿಶ್ ಬಂಧುಗಳ ನಡುವೆ ರಕ್ತದ ಗೋಡೆಯನ್ನು ಹೆಣೆಯಲು ಪ್ರಯತ್ನಿಸುತ್ತಿರುವ ಭಯೋತ್ಪಾದಕ ಸಂಘಟನೆಯನ್ನು ನಿರ್ಮೂಲನೆ ಮಾಡುತ್ತೇವೆ' ಎಂದು ಟರ್ಕಿ ಸಂಸತ್‍ನಲ್ಲಿ ಎರ್ದೋಗನ್ ಎಚ್ಚರಿಕೆ ನೀಡಿದ್ದಾರೆ.

ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ)ಯನ್ನು ಭಯೋತ್ಪಾದಕ ಸಂಘಟನೆ ಎಂದು ಟರ್ಕಿ, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಗುರುತಿಸಿದೆ. ಪಿಕೆಕೆ 1984ರಲ್ಲಿ ಟರ್ಕಿ ದೇಶದ ವಿರುದ್ಧ ಸಶಸ್ತ್ರ ದಂಗೆಯನ್ನು ಪ್ರಾರಂಭಿಸಿದೆ. ಅಮೆರಿಕ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್‍ಡಿಎಫ್)ನ ಒಂದು ಬಣವಾಗಿರುವ ವೈಪಿಜಿಯು ಪಿಕೆಕೆಯ ಅಂಗಸಂಸ್ಥೆ ಎಂದು ಟರ್ಕಿ ಪರಿಗಣಿಸಿದ್ದು ಅದನ್ನೂ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News