ರಶ್ಯ ವಿರುದ್ಧ ದೀರ್ಘಶ್ರೇಣಿಯ ಕ್ಷಿಪಣಿ ಬಳಸಲು ಉಕ್ರೇನ್ ಗೆ ಅನುಮತಿ
PC : NDTV
ಜರ್ಮನಿ: ಈ ವಾರದ ಆರಂಭದಿಂದ ಉಕ್ರೇನ್ ಮೇಲೆ ರಶ್ಯ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಶ್ಯದ ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿ ಪ್ರಯೋಗಿಸಲು ಉಕ್ರೇನ್ ಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿರುವುದಾಗಿ ಜರ್ಮನಿ ಸೇರಿದಂತೆ ಉಕ್ರೇನ್ ನ ಯುರೋಪಿಯನ್ ಮಿತ್ರರಾಷ್ಟ್ರಗಳು ಮಂಗಳವಾರ ಘೋಷಿಸಿವೆ.
ಇದೊಂದು ಗಮನಾರ್ಹ ಬೆಳವಣಿಗೆಯಾಗಿದೆ. ಉಕ್ರೇನ್ ನ ಕೋರಿಕೆಯ ಹೊರತಾಗಿಯೂ ರಶ್ಯದೊಳಗೆ ಆಳವಾಗಿ ಪ್ರಹಾರ ನೀಡಲು ದೀರ್ಘ ಶ್ರೇಣಿಯ ಕ್ಷಿಪಣಿಗಳ ಬಳಕೆಗೆ ಅನುಮತಿಸಿದರೆ 3 ವರ್ಷದಿಂದ ಮುಂದುವರಿದಿರುವ ಉಕ್ರೇನ್ ಸಂಘರ್ಷ ಉಲ್ಬಣಗೊಳ್ಳಬಹುದು ಎಂದು ಮಿತ್ರರಾಷ್ಟ್ರಗಳು ಹಿಂಜರಿದಿದ್ದವು. ಅಂತಹ ನಿರ್ಬಂಧವನ್ನು ತೆರವುಗೊಳಿಸುವುದು ನೇಟೊದೊಂದಿಗೆ ಯುದ್ಧ ಎಂದರ್ಥವೆಂದು ರಶ್ಯ ಈ ಹಿಂದೆಯೇ ಹೇಳಿತ್ತು.
ಉಕ್ರೇನ್ ಗೆ ಸರಬರಾಜು ಮಾಡಿದ ಶಸ್ತ್ರಾಸ್ತ್ರಗಳ ಮೇಲೆ ಇನ್ನುಮುಂದೆ ಯಾವುದೇ ಶ್ರೇಣಿ ನಿರ್ಬಂಧವಿಲ್ಲ ಎಂದು ಜರ್ಮನ್ ಛಾನ್ಸೆಲರ್ ಫ್ರೆಡ್ರಿಕ್ ಮೆರ್ಝ್‍ರನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ. ಬರ್ಲಿನ್ ನಲ್ಲಿ ನಡೆದ ಯುರೋಪಿಯನ್ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಬ್ರಿಟನ್, ಫ್ರಾನ್ಸ್, ಅಮೆರಿಕ ಅಥವಾ ನಮ್ಮ ದೇಶದಿಂದ ಯಾವುದೇ ನಿರ್ಬಂಧವಿರುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಉಕ್ರೇನ್ ಈಗ ರಶ್ಯಾದ ಮಿಲಿಟರಿ ನೆಲೆಗಳ ಮೇಲೆ ಆಕ್ರಮಣ ಮಾಡುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳಬಹುದು' ಎಂದು ಹೇಳಿರುವುದಾಗಿ ವರದಿಯಾಗಿದೆ. ಮೆರ್ಝ್ ಅವರ ಪೂರ್ವಾಧಿಕಾರಿ ಓಲಾಫ್ ಸ್ಕೋಲ್ಜ್ ನಿರ್ಬಂಧಗಳನ್ನು ತೆಗೆದುಹಾಕುವ ಉಕ್ರೇನ್ ನ ಮನವಿಯನ್ನು ಪದೇ ಪದೇ ತಿರಸ್ಕರಿಸಿದ್ದರು. ಅಮೆರಿಕವು ಈಗಾಗಲೇ ನಿರ್ಬಂಧಗಳನ್ನು ತೆರವುಗೊಳಿಸಿದ್ದು ಮಾಜಿ ಅಧ್ಯಕ್ಷ ಜೋ ಬೈಡನ್, ದೀರ್ಘಶ್ರೇಣಿಯ `ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಂ' ಅನ್ನು ರಶ್ಯದೊಳಗೆ ಬಳಕೆ ಮಾಡಲು ಉಕ್ರೇನ್ ಗೆ ಅಧಿಕಾರ ನೀಡಿದ್ದರು.
► ಅಪಾಯಕಾರಿ ನಡೆ: ರಶ್ಯ ಎಚ್ಚರಿಕೆ
ಉಕ್ರೇನ್ ಗೆ ವರ್ಧಿತ ದೀರ್ಘಶ್ರೇಣಿಯ ಕ್ಷಿಪಣಿ ಸಾಮಥ್ರ್ಯಗಳನ್ನು ಒದಗಿಸುವ ಯುರೋಪಿಯನ್ ರಾಷ್ಟ್ರಗಳ ಯಾವುದೇ ಕ್ರಮವು ಅಪಾಯಕಾರಿ ನಡೆಯಾಗಿದೆ ಎಂದು ರಶ್ಯ ಎಚ್ಚರಿಕೆ ನೀಡಿದೆ.
ಈ ಸಂಭಾವ್ಯ ನಿರ್ಧಾರಗಳು, ಅಂತಹ ನಿರ್ಧಾರಗಳನ್ನು ನಿಜಕ್ಕೂ ತೆಗೆದುಕೊಂಡಿದ್ದರೆ, ರಾಜಕೀಯ ಇತ್ಯರ್ಥವನ್ನು ತಲುಪುವ ನಮ್ಮ ಆಶಯಕ್ಕೆ ವಿರುದ್ಧವಾಗಿವೆ' ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳ ಬಳಕೆಯ ಮೇಲಿನ ನಿರ್ಬಂಧ ತೆರವುಗೊಳಿಸುವುದನ್ನು ನೇಟೊದೊಂದಿಗೆ ಯುದ್ಧ ಎಂದು ಅರ್ಥ ಮಾಡಿಕೊಳ್ಳುವುದಾಗಿ ರಶ್ಯ ಈ ಹಿಂದೆಯೇ ಬಹಿರಂಗ ಬೆದರಿಕೆ ಹಾಕಿತ್ತು. ಪರಮಾಣು ಶಕ್ತ ದೇಶಗಳ ಬೆಂಬಲದ ಯಾವುದೇ ದಾಳಿಯನ್ನು ಜಂಟಿ ದಾಳಿಯೆಂದು ರಶ್ಯ ಪರಿಗಣಿಸುತ್ತದೆ ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳಿಂದ ದಾಳಿ ನಡೆಸಿದರೆ ರಶ್ಯ ಪರಮಾಣು ಅಸ್ತ್ರಗಳನ್ನು ಬಳಸಬಹುದು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.