ಉಕ್ರೇನ್: ರಶ್ಯದ ದಾಳಿಯಲ್ಲಿ ಮಗು ಸಹಿತ 5 ಮಂದಿ ಮೃತ್ಯು
PC : X
ಕೀವ್: ಉತ್ತರ ಉಕ್ರೇನ್ ನ ಪ್ರಿಲುಕಿ ನಗರದ ಮೇಲೆ ಗುರುವಾರ ಬೆಳಿಗ್ಗೆ ರಶ್ಯ ನಡೆಸಿದ ಡ್ರೋನ್ ದಾಳಿಯಲ್ಲಿ 1 ವರ್ಷದ ಮಗು, ಅದರ ತಾಯಿ ಹಾಗೂ ಅಜ್ಜಿ ಸೇರಿದಂತೆ ಕನಿಷ್ಠ 5 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಬೆಳಿಗ್ಗೆ 5:30ಕ್ಕೆ ಪ್ರಿಲುಕಿ ನಗರದ ವಸತಿ ಪ್ರದೇಶದ ಮೇಲೆ 6 ಡ್ರೋನ್ ಗಳು ಅಪ್ಪಳಿಸಿದ್ದು ಮನೆಯೊಂದರಲ್ಲಿದ್ದ ಮಗು, ಅದರ ತಾಯಿ ಮತ್ತು ಅಜ್ಜಿ ಮೃತಪಟ್ಟಿದ್ದಾರೆ. ಗಾಯಗೊಂಡ 6 ಮಂದಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಲೊಬಿಡ್‍ಸ್ಕಿ ಜಿಲ್ಲೆಯಲ್ಲಿ ಎರಡು ಅಪಾರ್ಟ್‍ಮೆಂಟ್ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ವಾಹನಗಳು ಹಾನಿಗೊಂಡಿವೆ ಎಂದು ವರದಿಯಾಗಿದೆ. ಬುಧವಾರ ತಡರಾತ್ರಿಯಿಂದ ಉಕ್ರೇನ್ ನ ಡೊನೆಟ್ಸ್ಕ್, ಖಾರ್ಕಿವ್, ಒಡೆಸಾ, ಸುಮಿ, ಚೆರ್ನಿಹಿವ್, ಡ್ನಿಪ್ರೊ ಮತ್ತು ಖೆರ್ಸಾನ್ ಸೇರಿದಂತೆ ಹಲವು ಪ್ರದೇಶಗಳನ್ನು ಗುರಿಯಾಗಿಸಿ 103 ಡ್ರೋನ್ ಗಳು ಹಾಗೂ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿದ್ದು ವ್ಯಾಪಕ ಸಾವು-ನೋವು, ನಾಶ-ನಷ್ಟ ಸಂಭವಿಸಿದೆ. ಇದು ಮತ್ತೊಂದು ಬೃಹತ್ ದಾಳಿಯಾಗಿದೆ. ಅತ್ಯಂತ ಕಠಿಣ ನಿರ್ಬಂಧ ಹೇರಲು ಮತ್ತು ಸಾಮೂಹಿಕವಾಗಿ ಒತ್ತಡ ಹೇರಲು ಇದು ಮತ್ತೊಂದು ಕಾರಣವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.
ಈ ಮಧ್ಯೆ, ಬುಧವಾರ ಅಮೆರಿಕ ಅಧ್ಯಕ್ಷ ಟ್ರಂಪ್ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ರಶ್ಯದ ಮಿಲಿಟರಿ ವಾಯುನೆಲೆಯ ಮೇಲೆ ಉಕ್ರೇನ್ ನಡೆಸಿದ ತೀವ್ರ ಡ್ರೋನ್ ಗಾಳಿಗೆ ರಶ್ಯವು ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಪುಟಿನ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.