ಉಕ್ರೇನ್ ಮೇಲೆ ರಶ್ಯದ ಡ್ರೋನ್, ಕ್ಷಿಪಣಿ ಸುರಿಮಳೆ: 4 ಮಕ್ಕಳ ಸಹಿತ 15 ಮೃತ್ಯು
PC: PTI
ಕೀವ್, ಆ.28: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯ ನಡೆಸಿದ ಕ್ಷಿಪಣಿ ಮತ್ತು ಡ್ರೋನ್‍ಗಳ ಸುರಿಮಳೆಯಲ್ಲಿ 4 ಮಕ್ಕಳು ಸೇರಿದಂತೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಇತರ 48 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬುಧವಾರ ತಡರಾತ್ರಿಯಿಂದ ರಶ್ಯವು ಉಕ್ರೇನ್‍ನಾದ್ಯಂತ 598 ಡ್ರೋನ್ ಹಾಗೂ 31 ಕ್ಷಿಪಣಿ ದಾಳಿ ನಡೆಸಿರುವುದಾಗಿ ಉಕ್ರೇನಿನ ವಾಯುಪಡೆ ಹೇಳಿದೆ. ಕೀವ್‍ನಲ್ಲಿ ಯುರೋಪಿಯನ್ ಯೂನಿಯನ್‍ನ ರಾಜತಾಂತ್ರಿಕ ನಿಯೋಗದ ಕಚೇರಿಯ ಕಟ್ಟಡಕ್ಕೂ ಹಾನಿಯಾಗಿದೆ.
ಡಾರ್ನಿಟ್ಸ್ಕಿ ಜಿಲ್ಲೆಯಲ್ಲಿ ಐದು ಅಂತಸ್ತಿನ ಕಟ್ಟಡದ ಮೇಲೆ `ನೇರ ದಾಳಿ' ನಡೆದಿದ್ದು ಕಟ್ಟಡ ಸಂಪೂರ್ಣ ನಾಶಗೊಂಡಿದೆ. ಮಧ್ಯ ಕೀವ್‍ನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.
ರಾಜಧಾನಿಯಾದ್ಯಂತ 20ಕ್ಕೂ ಅಧಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು 100ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಕೀವ್ ನಗರಾಡಳಿತದ ಮುಖ್ಯಸ್ಥ ತೈಮೂರ್ ತಕಚೆಂಕೊ ಹೇಳಿದ್ದಾರೆ.
`ರಶ್ಯವು ಸಂಧಾನ ಮಾತುಕತೆಯ ಬದಲು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಆಯ್ಕೆ ಮಾಡಿಕೊಂಡಿದೆ. ಶಾಂತಿಗಾಗಿ ಮನವಿ ಮಾಡಿರುವ ವಿಶ್ವದ ಪ್ರತಿಯೊಬ್ಬರೂ ಈ ದಾಳಿಯನ್ನು ಖಂಡಿಸುತ್ತಾರೆಂದು ನಾವು ನಿರೀಕ್ಷಿಸಿದ್ದೇವೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.