×
Ad

ಗಾಝಾ ಹತ್ಯೆಯ ಕುರಿತ ಇಸ್ರೇಲ್ ತನಿಖೆಯ ಫಲಿತಾಂಶ ನೀಡಬೇಕು: ವಿಶ್ವಸಂಸ್ಥೆ ಆಗ್ರಹ

Update: 2025-08-26 21:00 IST

PC : un.org/en/

ಜಿನೆವಾ, ಆ.26: ಗಾಝಾದಲ್ಲಿ ಆಪಾದಿತ ಕಾನೂನುಬಾಹಿರ ಹತ್ಯೆಗಳ ಕುರಿತು ಇಸ್ರೇಲ್ ತನಿಖೆ ಮಾತ್ರ ನಡೆಸುವುದಲ್ಲ, ಈ ತನಿಖೆಗಳು ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆ ಮಂಗಳವಾರ ಆಗ್ರಹಿಸಿದೆ.

ಸೋಮವಾರ ಗಾಝಾದಲ್ಲಿ ಆಸ್ಪತ್ರೆಯ ಮೇಲಿನ ಇಸ್ರೇಲ್ ದಾಳಿಯಲ್ಲಿ ಐವರು ಪತ್ರಕರ್ತರ ಸಹಿತ 20 ಮಂದಿ ಸಾವನ್ನಪ್ಪಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರ ತಮೀನ್ ಅಲ್-ಖೀತಾನ್ `ಗಾಝಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಸಿಬ್ಬಂದಿಗಳ ಹತ್ಯೆಯಾಗಿರುವುದು ಪತ್ರಕರ್ತರನ್ನು ಗುರಿಯಾಗಿಸುವ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆಯೂ ಇಸ್ರೇಲಿ ಅಧಿಕಾರಿಗಳು ಇಂತಹ ಹತ್ಯೆಗಳ ಬಗ್ಗೆ ತನಿಖೆಯನ್ನು ಘೋಷಿಸಿದ್ದರು. ಇದು ಇಸ್ರೇಲ್‍ನ ಜವಾಬ್ದಾರಿಯೂ ಆಗಿದೆ. ಆದರೆ ಇಂತಹ ತನಿಖೆಗಳು ಫಲಿತಾಂಶವನ್ನು ನೀಡಬೇಕಾಗಿದೆ. ಫಲಿತಾಂಶಗಳು ಅಥವಾ ಹೊಣೆಗಾರಿಕೆಯ ಕ್ರಮಗಳನ್ನು ನಾವು ಇನ್ನೂ ನೋಡಿಲ್ಲ. ಈ ತನಿಖೆಗಳ ಫಲಿತಾಂಶವನ್ನು ನಾವು ಇನ್ನಷ್ಟೇ ನೋಡಬೇಕಾಗಿದೆ. ನಾವು ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಕರೆ ನೀಡುತ್ತೇವೆ' ಎಂದು ಹೇಳಿದ್ದಾರೆ.

ಇಸ್ರೇಲ್-ಹಮಾಸ್ ನಡುವಿನ ಯುದ್ಧ ಆರಂಭಗೊಂಡ 2023ರ ಅಕ್ಟೋಬರ್ 7ರಿಂದ ಗಾಝಾದಲ್ಲಿ ಕನಿಷ್ಠ 247 ಪತ್ರಕರ್ತರು ಹತರಾಗಿದ್ದಾರೆ. ಈ ಪತ್ರಕರ್ತರು ಇಡೀ ಪ್ರಪಂಚದ ಕಣ್ಣು ಮತ್ತು ಕಿವಿಗಳಾಗಿದ್ದು ಅವುಗಳನ್ನು ರಕ್ಷಿಸಬೇಕು. ಪತ್ರಕರ್ತರು ಸೇರಿದಂತೆ ಎಲ್ಲಾ ನಾಗರಿಕರ ಹತ್ಯೆಯನ್ನು ಸಂಪೂರ್ಣವಾಗಿ, ನ್ಯಾಯಸಮ್ಮತವಾಗಿ ಮತ್ತು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News