ರೊಹಿಂಗ್ಯಾಗಳ ವಿರುದ್ಧ ದ್ವೇಷ ಹರಡುವ ಫೇಸ್‍ಬುಕ್ ಪುಟದ ಹಿಂದೆ ಮ್ಯಾನ್ಮಾರ್ ಸೇನೆ : ವಿಶ್ವಸಂಸ್ಥೆ ತನಿಖಾ ವರದಿ

Update: 2024-03-27 17:08 GMT

Photo:X/@ndtv

ವಿಶ್ವಸಂಸ್ಥೆ : ರೊಹಿಂಗ್ಯಾಗಳ ವಿರುದ್ಧ ದ್ವೇಷ ಹರಡುವ ಹಲವು ಫೇಸ್‍ಬುಕ್ ಪುಟಗಳ ಹಿಂದೆ ಮ್ಯಾನ್ಮಾರ್‌ ನ ಮಿಲಿಟರಿಯಿದೆ ಎಂದು ವಿಶ್ವಸಂಸ್ಥೆಯ ತನಿಖಾ ತಂಡ ಬುಧವಾರ ವರದಿ ಮಾಡಿದೆ.

2017ರಲ್ಲಿ ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಯಿಂದ ಕಂಗಾಲಾದ ಸಾವಿರಾರು ರೊಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದು ಮ್ಯಾನ್ಮಾರ್ ಸೇನೆಯ ಕೃತ್ಯವು ನರಮೇಧಕ್ಕೆ ಸಮವಾಗಿದೆ ಎಂಬ ಆರೋಪದ ಬಗ್ಗೆ ವಿಶ್ವಸಂಸ್ಥೆ ತನಿಖೆ ನಡೆಸುತ್ತಿದೆ. ರೊಹಿಂಗ್ಯಾಗಳ ವಿರುದ್ಧ ದ್ವೇಷಭಾವನೆ ಹರಡಲು ಫೇಸ್‍ಬುಕ್ ನೆರವಾಗುತ್ತಿತ್ತು ಎಂಬ ಆರೋಪವಿದೆ. ತಮ್ಮ ವಿರುದ್ಧ ನಿರ್ದೇಶಿಸಿದ್ದ ದ್ವೇಷ ಭಾಷಣವನ್ನು ತಡೆಯಲು ಫೇಸ್‍ಬುಕ್ ವಿಫಲವಾಗಿದೆ ಎಂದು 2021ರ ಅಂತ್ಯದಲ್ಲಿ ರೊಹಿಂಗ್ಯಾ ನಿರಾಶ್ರಿತರು ಫೇಸ್‍ಬುಕ್ ವಿರುದ್ಧ 150 ಶತಕೋಟಿ ಡಾಲರ್ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು. ಇದೀಗ `ಮ್ಯಾನ್ಮಾರ್ ಗಾಗಿ ವಿಶ್ವಸಂಸ್ಥೆಯ ಸ್ವತಂತ್ರ ಕಾರ್ಯವಿಧಾನ' (ಐಐಎಂಎಂ) ವರದಿ ನೀಡಿದ್ದು `ಮ್ಯಾನ್ಮಾರ್‌ ನ ಮಿಲಿಟರಿ ರಹಸ್ಯವಾಗಿ ದ್ವೇಷಭಾಷಣ ಅಭಿಯಾನವನ್ನು ಆಯೋಜಿಸಿರುವುದಕ್ಕೆ ಸ್ಪಷ್ಟ ಪುರಾವೆಯಿದೆ' ಎಂದಿದೆ. ರೊಹಿಂಗ್ಯಾ ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಮತ್ತು ಭಯ ಹುಟ್ಟಿಸಲು ರೂಪಿಸಲಾದ ಪ್ರಕ್ರಿಯೆಯನ್ನು ಮಿಲಿಟರಿಯು ವ್ಯವಸ್ಥಿತ ಮತ್ತು ಸಂಘಟಿತ ರೀತಿಯಲ್ಲಿ ಪ್ರಸಾರ ಮಾಡಿದೆ. ಲಕ್ಷಾಂತರ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯವುಳ್ಳ ಸಾಮಾಜಿಕ ಮಾಧ್ಯಮ ಸೈಟ್‍ನಲ್ಲಿ ಪುಟಗಳ ರಹಸ್ಯ ಜಾಲವನ್ನು ರಚಿಸುವ ಮೂಲಕ ಇದನ್ನು ಸಾಧಿಸಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಐಐಎಂಎಂ ಅನ್ನು ವಿಶ್ವಸಂಸ್ಥೆ ಮಾನವಹಕ್ಕುಗಳ ಸಮಿತಿಯು ಅತ್ಯಂತ ಗಂಭೀರವಾದ ಅಂತರಾಷ್ಟ್ರೀಯ ಅಪರಾಧಗಳ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗಾಗಿ ಫೈಲ್‍ಗಳನ್ನು ಸಿದ್ಧಪಡಿಸಲು 2018ರಲ್ಲಿ ಸ್ಥಾಪಿಸಿದೆ. 2017ರ ಜುಲೈಯಿಂದ ಡಿಸೆಂಬರ್ ಅವಧಿಯಲ್ಲಿ 43 ಫೇಸ್‍ಬುಕ್ ಪುಟಗಳಲ್ಲಿ ಪೋಸ್ಟ್ ಮಾಡಲಾದ ವಿಷಯಗಳನ್ನು ಇದುಪರಿಶೀಲಿಸಿದೆ. ರೊಹಿಂಗ್ಯಾಗಳ ಹಲವು ಮನೆಗಳಿಗೆ ಬೆಂಕಿಹಚ್ಚಿದ, ಸಾವಿರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಥಳಿಸಿದ, ಲೈಂಗಿಕ ಹಲ್ಲೆ ನಡೆಸಿದ, ಹತರಾದ ಸಂದರ್ಭದಲ್ಲೇ ಮ್ಯಾನ್ಮಾರ್ ಮಿಲಿಟರಿಯ ದ್ವೇಷಭಾಷಣ ಅಭಿಯಾನ ಮುಂದುವರಿದಿತ್ತು. ಸಾವಿರಾರು ರೊಹಿಂಗ್ಯಾಗಳು ತಮ್ಮ ಮನೆ ಬಿಟ್ಟು ಪಲಾಯನ ಮಾಡುವವರೆಗೆ ಇದು ನಿರಂತರವಾಗಿ ಮುಂದುವರಿದಿದೆ. ಹಿಂಸಾಚಾರ ತಡೆಗಟ್ಟಿ, ತನ್ನ ಪ್ರಜೆಗಳನ್ನು ರಕ್ಷಿಸುವ ಕ್ರಮ ಕೈಗೊಳ್ಳುವ ಬದಲು ಮ್ಯಾನ್ಮಾರ್ ಮಿಲಿಟರಿ ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ನಡೆಸಿತು ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News