ಗಾಝಾದಲ್ಲಿ ವಿಶ್ವಸಂಸ್ಥೆ ಏಜೆನ್ಸಿಗಳ ಮುಖ್ಯಸ್ಥರಿಗೆ ವೀಸಾ ನವೀಕರಣಕ್ಕೆ ಇಸ್ರೇಲ್ ನಿರಾಕರಣೆ: ವಿಶ್ವಸಂಸ್ಥೆ ಕಳವಳ
ಸಾಂದರ್ಭಿಕ ಚಿತ್ರ
ವಿಶ್ವಸಂಸ್ಥೆ, ಜು.18: ಗಾಝಾದಲ್ಲಿ ವಿಶ್ವಸಂಸ್ಥೆಯ ಕನಿಷ್ಠ ಮೂರು ಏಜೆನ್ಸಿಗಳ ಮುಖ್ಯಸ್ಥರಿಗೆ ವೀಸಾಗಳನ್ನು ನವೀಕರಿಸಲು ಇಸ್ರೇಲ್ ನಿರಾಕರಿಸಿರುವುದಾಗಿ ವರದಿಯಾಗಿದೆ.
ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿನ ಏಜೆನ್ಸಿ(ಒಸಿಎಚ್ಎ)ಯ ಸ್ಥಳೀಯ ಮುಖ್ಯಸ್ಥರು, ಮಾನವ ಹಕ್ಕುಗಳ ಏಜೆನ್ಸಿ(ಒಎಚ್ಸಿಎಚ್ಆರ್)ಯ ಸ್ಥಳೀಯ ಮುಖ್ಯಸ್ಥರು ಮತ್ತು ಗಾಝಾದಲ್ಲಿ ಫೆಲೆಸ್ತೀನೀಯರನ್ನು ಬೆಂಬಲಿಸುವ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ)ಯ ಸ್ಥಳೀಯ ಮುಖ್ಯಸ್ಥರ ವೀಸಾವನ್ನು ಕೆಳ ತಿಂಗಳಿನಿಂದ ನವೀಕರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡ್ಯುಜಾರಿಕ್ ಹೇಳಿದ್ದಾರೆ.
ಅಗತ್ಯವಿರುವ ನಾಗರೀಕರಿಗೆ ಸಹಾಯವನ್ನು ನೀಡುವುದು ಮತ್ತು ತನ್ನ ಸಿಬ್ಬಂದಿಗಳ ಪ್ರತ್ಯಕ್ಷ ಅನುಭವವನ್ನು ವರದಿ ಮಾಡುವುದಷ್ಟೇ ತನ್ನ ಕಾರ್ಯವಲ್ಲ, ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಪ್ರತಿಪಾದಿಸುವುದೂ ತನ್ನ ಜವಾಬ್ದಾರಿಯಾಗಿದೆ ಎಂದು ವಿಶ್ವಸಂಸ್ಥೆ ಮಾನವೀಯ ವ್ಯವಹಾರಗಳ ಏಜೆನ್ಸಿಯ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ. ಆದರೆ ಪ್ರತೀ ಬಾರಿಯೂ ನಾವು ನೋಡಿದ್ದನ್ನು ವರದಿ ಮಾಡಿದಾಗ ನಮ್ಮ ಮೇಲೆ ಹೆಚ್ಚಿನ ಪ್ರತಿಬಂಧ ವಿಧಿಸುವ ಬೆದರಿಕೆ ಒಡ್ಡಲಾಗುತ್ತಿದೆ. ಗಾಝಾದಲ್ಲಿ ನಮ್ಮ ಕಾರ್ಯಕ್ಕೆ ಅತೀ ಹೆಚ್ಚಿನ ಸವಾಲು ಎದುರಾಗಿದೆ. ನಾಗರಿಕರ ರಕ್ಷಣೆಯ ಕುರಿತ ನಮ್ಮ ಕೆಲಸಕ್ಕೆ ಪ್ರತಿಯಾಗಿ ಇಸ್ರೇಲ್ ನಮ್ಮ ವೀಸಾಗಳನ್ನು ನವೀಕರಿಸುತ್ತಿಲ್ಲ ಅಥವಾ ಅದರ ಅವಧಿಯನ್ನು ಕಡಿಮೆಗೊಳಿಸುತ್ತಿದೆ ಎಂದು ಫ್ಲೆಚರ್ ಹೇಳಿದ್ದಾರೆ.
ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಫ್ಲೆಚರ್ `ಗಾಝಾದಲ್ಲಿನ ಭೀಕರ ಪರಿಸ್ಥಿತಿಯನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಆಹಾರದ ಕೊರತೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಆಹಾರಕ್ಕೆ ಕಾಯುವ ಫೆಲೆಸ್ತೀನೀಯರ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ. ಜಿನೆವಾ ನಿರ್ಣಯದ ಅಡಿಯಲ್ಲಿ ನಾಗರಿಕರಿಗೆ ಅಗತ್ಯದ ನೆರವು ಒದಗಿಸುವ ತನ್ನ ಬದ್ಧತೆಗೆ ಇಸ್ರೇಲ್ ವಿಫಲವಾಗಿದೆ.
ಗಾಝಾ ಪ್ರವೇಶಿಸಲು ಮತ್ತು ತಮ್ಮ ಕಾರ್ಯಗಳನ್ನು ಮುಂದುವರಿಸಲು ಸಿಬ್ಬಂದಿಗಳಿಗೆ ಭದ್ರತಾ ಕ್ಲಿಯರೆನ್ಸ್ ಅನ್ನು ಇಸ್ರೇಲ್ ನೀಡುತ್ತಿಲ್ಲ. ಜೀವ ಉಳಿಸುವ ತುರ್ತು ವೈದ್ಯಕೀಯ ತಂಡದ ಸಿಬ್ಬಂದಿಗಳಿಗೂ ಗಾಝಾ ಪ್ರವೇಶಿಸಲು ಅನುಮತಿ ನಿರಾಕರಿಸಲಾಗುತ್ತಿದೆ. ನೆರವು ವಿತರಿಸುವ ನೂರಾರು ಸಿಬ್ಬಂದಿಗಳು ಹತರಾಗಿದ್ದಾರೆ ಮತ್ತು ಕೆಲಸ ಮುಂದುವರಿಸಿರುವ ಸಿಬ್ಬಂದಿಗಳೂ ಅಪಾಯಕಾರಿ ಮತ್ತು ಸವಾಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ' ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಇಸ್ರೇಲಿನ ರಾಜಕೀಯ ಸಂಯೋಜಕಿ ರೆಯುಟ್ ಶಪಿರ್ ಬೆನ್-ನಫ್ತಾಲಿ ಈ ಹೇಳಿಕೆಯನ್ನು ವಿರೋಧಿಸಿದ್ದು `ಒಸಿಎಚ್ಎ ತನ್ನ ಹೇಳಿಕೆಗಳು ಹಾಗೂ ಕಾರ್ಯಗಳಲ್ಲಿ ತಟಸ್ಥತೆ ಮತ್ತು ನಿಷ್ಪಕ್ಷಪಾತವನ್ನು ತ್ಯಜಿಸಿದ್ದು ಇಸ್ರೇಲ್ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ' ಎಂದು ಆರೋಪಿಸಿದರು. ಅಕ್ಟೋಬರ್ 7ರ ದಾಳಿಯು ಇಸ್ರೇಲ್ ನಲ್ಲಿ ಸುಮಾರು 1,200 ಮಂದಿಯನ್ನು ಹತ್ಯೆ ಮಾಡಿದೆ ಮತ್ತು ಸುಮಾರು 250 ಮಂದಿಯನ್ನು ಒತ್ತೆಸೆರೆಯಲ್ಲಿ ಇರಿಸಲು ಮತ್ತು ಗಾಝಾ ಯುದ್ಧಕ್ಕೆ ಹಾಗೂ ಮಾನವೀಯ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ ಎಂಬುದನ್ನು 15 ಸದಸ್ಯರ ಒಸಿಎಚ್ಎ ಏಜೆನ್ಸಿ ಮರೆತಿರುವಂತೆ ಕಾಣುತ್ತದೆ . ವಾಸ್ತವಾಂಶವನ್ನು ಮರೆಮಾಚಿ ಇಸ್ರೇಲನ್ನು ಅಪರಾಧಿಗಳ ಸ್ಥಾನದಲ್ಲಿ ಇರಿಸಲಾಗಿದೆ. ಆದರೆ ಇಸ್ರೇಲಿಗಳ ಸಂಕಷ್ಟಕ್ಕೆ ಮಾತ್ರವಲ್ಲ, ಫೆಲೆಸ್ತೀನೀಯರ ಸಮಸ್ಯೆಗೂ ಮೂಲ ಕಾರಣವಾದ ಹಮಾಸ್ನ ಕಾರ್ಯಗಳ ಬಗ್ಗೆ ಮೌನ ವಹಿಸಲಾಗಿದೆ ಎಂದವರು ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದ್ದಾರೆ.
►ಗಾಝಾ ಪ್ರವೇಶಕ್ಕೆ ಅನುಮತಿ ನಿರಾಕರಣೆ
ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ಕಚೇರಿಯ ಮುಖ್ಯಸ್ಥರಿಗೆ ಗಾಝಾ ಪ್ರವೇಶಿಸಲು ಇಸ್ರೇಲ್ ಅನುಮತಿ ನಿರಾಕರಿಸುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರೆ ರವೀನಾ ಶಮ್ದಾಸನಿ ಹೇಳಿದ್ದಾರೆ.
2025ರ ಫೆಬ್ರವರಿಯಲ್ಲಿ ಅವರು ಗಾಝಾದಲ್ಲಿನ ತನ್ನ ಕಚೇರಿಯನ್ನು ಪ್ರವೇಶಿಸಲು ಮುಂದಾದಾಗ ಪ್ರವೇಶ ನಿರಾಕರಿಸಲಾಗಿತ್ತು. ಆ ಬಳಿಕ ಅವರು ತನ್ನ ಕಚೇರಿಯನ್ನು ಪ್ರವೇಶಿಸಿಲ್ಲ. ನೆರವು ಕಾರ್ಯಕರ್ತರು, ವಿಶ್ವಸಂಸ್ಥೆ ಸಿಬ್ಬಂದಿಗಳು, ಪತ್ರಕರ್ತರಿಗೂ ಗಾಝಾ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ' ಎಂದು ರವೀನಾರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.